ಕರ್ನಾಟಕ

karnataka

ETV Bharat / science-and-technology

ಜೈವಿಕ ಜೆಟ್​ ಇಂಧನ ಆವಿಷ್ಕರಿಸಿದ ಡೆಹ್ರಾಡೂನ್ ಐಐಪಿ: ಇಂಧನ ಕೊಳ್ಳಲು 13 ದೇಶಗಳ ಆಸಕ್ತಿ - ಐಐಪಿ ಲ್ಯಾಬ್‌ನಲ್ಲಿ ಸಾವಯವ ಜೆಟ್ ಇಂಧನ

ಡೆಹ್ರಾಡೂನ್‌ನಲ್ಲಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಹೊಸ ಮಾದರಿಯ ಜೈವಿಕ ಜೆಟ್ ಇಂಧನವನ್ನು ಕಂಡು ಹಿಡಿದಿದೆ. ವಿಮಾನ ಹಾರಾಟಕ್ಕೆ ಬಳಸಬಹುದಾದ ಈ ಸಾವಯವ ಇಂಧನ ಬಳಸಲು ವಿಶ್ವದ ಹಲವಾರು ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸಿವೆ.

IIPs innovation bio jet fuel
IIPs innovation bio jet fuel

By

Published : Mar 15, 2023, 7:09 PM IST

ಡೆಹ್ರಾಡೂನ್: ಇತ್ತೀಚೆಗೆ ಮೊಟ್ಟಮೊದಲ ಬಾರಿಗೆ ಡೆಹ್ರಾಡೂನ್‌ನಲ್ಲಿರುವ ಭಾರತ ಸರ್ಕಾರದ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಐಐಪಿ ಲ್ಯಾಬ್‌ನಲ್ಲಿ ಸಾವಯವ ಜೆಟ್ ಇಂಧನವನ್ನು ಜಗತ್ತಿಗೆ ಪರಿಚಯಿಸಲಾಗಿದೆ. ಈ ಮೂಲಕ ನಮ್ಮ ಪರಿಸರ ಮತ್ತು ಭವಿಷ್ಯದ ಜೀವನಕ್ಕಾಗಿ ಜೈವಿಕ ಇಂಧನ ಬಳಕೆಯ ಮಹತ್ವವನ್ನೂ ಕೂಡ ತಿಳಿಸಲಾಗಿದೆ. ಹಲವಾರು ಪ್ರಯೋಗಗಳ ನಂತರ ಡೆಹ್ರಾಡೂನ್ ಐಐಪಿಯಲ್ಲಿ ಅಭಿವೃದ್ಧಿಪಡಿಸಿದ ಜೈವಿಕ ಜೆಟ್ ಇಂಧನವನ್ನು ಇಂದು ಭಾರತೀಯ ವಾಯುಪಡೆಯ ವಿಮಾನಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ.

ಏತನ್ಮಧ್ಯೆ ಈಗ ವಿದೇಶಿ ವಿಮಾನಯಾನ ಸಂಸ್ಥೆಗಳು ಕೂಡ ಈ ಜೈವಿಕ ಜೆಟ್ ಇಂಧನದ ಬಗ್ಗೆ ತಮ್ಮ ಆಸಕ್ತಿ ತೋರಿಸುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಯುರೋಪಿಯನ್ ಯೂನಿಯನ್ - ಏಷ್ಯಾ ಏವಿಯೇಷನ್ ​​ಸಹಭಾಗಿತ್ವ ಯೋಜನೆಯ (EU-SA APP) ಅಡಿ, ಯುರೋಪಿಯನ್ ಒಕ್ಕೂಟದ 7 ದೇಶಗಳು ಮತ್ತು ದಕ್ಷಿಣ ಏಷ್ಯಾದ 6 ದೇಶಗಳ ವಾಯುಯಾನ ಕಂಪನಿಗಳ ಪ್ರತಿನಿಧಿಗಳು ಮಂಗಳವಾರ ಡೆಹ್ರಾಡೂನ್ ಐಐಪಿಯಲ್ಲಿ ಹೊಸ ಇಂಧನದ ಬಳಕೆಯ ಬಗ್ಗೆ ಚರ್ಚಿಸಿದರು. ಇದಕ್ಕಾಗಿ ವರ್ಕಿಂಗ್ ಟು ಫೋಸ್ಟರ್ ಸಸ್ಟೈನಬಲ್ ಏವಿಯೇಷನ್ ​​ಫ್ಯುಯೆಲ್ಸ್ (SAF) ಎಂಬ ಕಾರ್ಯಾಗಾರ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಯುರೋಪಿಯನ್ ಯೂನಿಯನ್ ಏವಿಯೇಷನ್ ​​ಸೇಫ್ಟಿ ಏಜೆನ್ಸಿ (EASA)ಯನ್ನು ಪ್ರತಿನಿಧಿಸುವ ಕಾರ್ಲೋಸ್ ಫರ್ನಾಂಡಿಸ್ ಈಟಿವಿ ಭಾರತ್​ನೊಂದಿಗೆ ಮಾತನಾಡಿದರು. ಈ ಕಾರ್ಯಕ್ರಮದ ಅಡಿ, ಯುರೋಪ್ ಮತ್ತು ದಕ್ಷಿಣ ಏಷ್ಯಾದ ಅನೇಕ ದೇಶಗಳು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯನ್ನು ಸುಧಾರಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆ ಪ್ರಕ್ರಿಯೆ ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಯುರೋಪಿಯನ್ ಯೂನಿಯನ್ ಮತ್ತು ಭಾರತದ ನಡುವಿನ ವಾಯುಯಾನ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ EU-SA APP ಯೋಜನೆಯಡಿ ವಾಯು ಸಂಪರ್ಕ ಮತ್ತು ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಲು ಮತ್ತು ವಾಯುಯಾನ ಉದ್ಯಮ ಹೆಚ್ಚು ಸುಸ್ಥಿರಗೊಳಿಸಲು ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಜಾಗತಿಕ ಆರ್ಥಿಕತೆಯಲ್ಲಿ ವಾಯುಯಾನ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಇದು ಪರಿಸರದ ಮೇಲೆ ಕೂಡ ಪರಿಣಾಮ ಬೀರುತ್ತದೆ. EU-SA APP II ಯೋಜನೆಯು ಈ ಪರಿಣಾಮವನ್ನು ಎದುರಿಸಲು, ಜಾಗತಿಕ ಕಾರ್ಯತಂತ್ರಗಳನ್ನು ವಿಶ್ಲೇಷಿಸಲು ದಕ್ಷಿಣ ಏಷ್ಯಾದ ಎಲ್ಲಾ ಪ್ರಮುಖ ಮಧ್ಯಸ್ಥಗಾರರೊಂದಿಗೆ ಸಹಯೋಗ ಹೊಂದಿದೆ ಎಂದು ಕಾರ್ಲೋಸ್ ಫೆರ್ನಾಂಡಿಸ್ ಹೇಳಿದರು.

ಇದೇ ಸಂದರ್ಭದಲ್ಲಿ, ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಸಿಎಸ್ಐಆರ್ - ಐಐಪಿ ಡೆಹ್ರಾಡೂನ್‌ನ ನಿರ್ದೇಶಕ ಡಾ. ಅಂಜನ್ ರೇ, ಐಐಪಿ ಡೆಹ್ರಾಡೂನ್‌ನಲ್ಲಿ ಕೈಗೊಳ್ಳಲಾದ ಪ್ರಯೋಗದ ನಂತರ ಬಯೋಜೆಟ್ ಇಂಧನ ಕ್ಷೇತ್ರದ ಅಪಾರ ಸಾಧ್ಯತೆಗಳು ಬೆಳಕಿಗೆ ಬಂದಿವೆ ಮತ್ತು ಯಶಸ್ಸು ಪಡೆದುಕೊಂಡಿದೆ ಎಂದು ಹೇಳಿದರು. ಭಾರತೀಯ ಸೇನೆಯ ವಿಮಾನವು ಡೆಹ್ರಾಡೂನ್ ಐಐಪಿಯಿಂದ ಮೊದಲ ಬಾರಿಗೆ ಜೈವಿಕ ಜೆಟ್ ಇಂಧನವನ್ನು ಬಳಸಿ ಹಾರಾಟ ನಡೆಸಿದ ರೀತಿ ಖಂಡಿತವಾಗಿಯೂ ಇಡೀ ವಿಶ್ವದ ಗಮನ ಸೆಳೆದಿದೆ ಎಂದು ಅವರು ಹೇಳಿದರು.

ಈ ಸಂಶೋಧನೆಯ ನಂತರ ಇದನ್ನು ವಾಣಿಜ್ಯ ವೇದಿಕೆಯಲ್ಲಿ ಹೇಗೆ ಪ್ರಾರಂಭಿಸಬೇಕು ಎಂಬುದು ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದನ್ನು ನೀತಿ ನಿರೂಪಕರು ಮತ್ತು ಮಧ್ಯಸ್ಥಗಾರರೊಂದಿಗೆ ಕೂಲಂಕಷವಾಗಿ ಚರ್ಚಿಸಲಾಗುತ್ತಿದೆ ಮತ್ತು ಅದರ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅದರ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ. ಪರಿಸರವನ್ನು ಹೇಗೆ ಸಂರಕ್ಷಿಸುವುದು ಎಂಬ ಪ್ರಶ್ನೆ ಈಗ ಬಹಳ ದೊಡ್ಡದಾಗಿದೆ. ಜೈವಿಕ ಜೆಟ್ ಇಂಧನವು ಆ ದಿಕ್ಕಿನಲ್ಲಿ ಸಮಸ್ಯೆಗೆ ಪರಿಹಾರವಾಗಬಹುದು ಎಂದರು.

ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ ಸಲೀಂ ಅಖ್ತರ್ ಫಾರೂಕಿ ಮಾತನಾಡಿ, ಇಂದು ನಮ್ಮಲ್ಲಿ ಹೆಚ್ಚಿನವರು ಪಳೆಯುಳಿಕೆ ಇಂಧನವನ್ನು ಅವಲಂಬಿಸಿದ್ದಾರೆ. ಇದನ್ನು ದಹಿಸಿದಾಗ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ರೀತಿಯ ಅನಿಲಗಳು ಬಿಡುಗಡೆಯಾಗುತ್ತವೆ. ಆದರೆ, ಇದಕ್ಕಿಂತ ಭಿನ್ನವಾಗಿ, ಜೈವಿಕ ಇಂಧನಗಳನ್ನು ಸಾವಯವ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದನ್ನು ವಿಶೇಷವಾಗಿ ಕೆಟ್ಟ ಎಣ್ಣೆಗಳು, ಕೊಬ್ಬುಗಳು ಮತ್ತು ನೈಸರ್ಗಿಕವಾಗಿ ಕಂಡುಬರುವ ಮರದ ಸಸ್ಯಗಳಿಂದ ತಯಾರಿಸಲಾಗುತ್ತದೆ ಎಂದರು.

ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿ: ಬಸವರಾಜ ಬೊಮ್ಮಾಯಿ

ABOUT THE AUTHOR

...view details