ನ್ಯೂಯಾರ್ಕ್ :ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಗಾಡ್ಫಾದರ್ ಎಂದೇ ಕರೆಯಲ್ಪಡುವ ಜೆಫ್ರಿ ಹಿಂಟನ್ ಗೂಗಲ್ನಲ್ಲಿನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ತಾವೇ ತಯಾರಿಸಿದ ಅತ್ಯಾಧುನಿಕ ತಂತ್ರಜ್ಞಾನವು ಭವಿಷ್ಯದಲ್ಲಿ ಒಡ್ಡಬಹುದಾದ ಅಪಾಯಗಳ ಬಗ್ಗೆ ವಿಶ್ವಕ್ಕೆ ಜಾಗೃತಿ ಮೂಡಿಸಲು ತಾವು ಕೆಲಸ ತೊರೆದಿರುವುದಾಗಿ ಅವರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ನ್ಯೂರಲ್ ನೆಟ್‌ವರ್ಕ್‌ಗಳಲ್ಲಿ ಹಿಂಟನ್‌ರ ಅದ್ಭುತ ಕೆಲಸವು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ರೂಪಿಸಿತು. ಎಐ ಇಂದಿನ ಅನೇಕ ಉತ್ಪನ್ನಗಳಿಗೆ ಶಕ್ತಿ ತುಂಬುತ್ತಿದೆ. ಹಿಂಟನ್ ಅವರು ಗೂಗಲ್ನಲ್ಲಿ ಒಂದು ದಶಕದ ಕಾಲ ಅರೆಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ತಾವು ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನದ ಅಪಾಯದ ಬಗ್ಗೆ ಕಾಳಜಿ ಮೂಡಿದೆ ಎಂದು ವರದಿಗಳು ತಿಳಿಸಿವೆ.
"ಅದನ್ನು ನಾನು ಮಾಡಿಲ್ಲದಿದ್ದರೆ ಇನ್ನಾರೋ ಮಾಡಿರುತ್ತಿದ್ದರು ಎಂಬ ಸಾಮಾನ್ಯ ಕ್ಷಮಾಪಣೆಯೊಂದಿಗೆ ನನ್ನನ್ನು ನಾನು ಸಮಾಧಾನ ಪಡಿಸಿಕೊಳ್ಳುತ್ತೇನೆ" ಎಂದು ಹಿಂಟನ್ ಅಂತಾರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡುತ್ತ ಹೇಳಿದ್ದಾರೆ. ಗೂಗಲ್ ತೊರೆಯುವ ತಮ್ಮ ನಿರ್ಧಾರದ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು, ಎಐ ತಂತ್ರಜ್ಞಾನದ ಪ್ರತಿಕೂಲ ಪರಿಣಾಮಗಳ ಬಗ್ಗೆ ತಿಳಿಸಲು ಗೂಗಲ್ ತೊರೆದಿದ್ದೇನೆಯೇ ಹೊರತು, ಈ ವಿಷಯದಲ್ಲಿ ನಿರ್ದಿಷ್ಟವಾಗಿ ಗೂಗಲ್ ಕಂಪನಿಯನ್ನು ಗುರಿಯಾಗಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ನನ್ನ ನಿರ್ಧಾರದಿಂದ ಗೂಗಲ್ ಮೇಲೆ ಯಾವ ರೀತಿಯ ಪರಿಣಾಮವಾಗಬಹುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ, ಎಐ ತಂತ್ರಜ್ಞಾನದ ಅಪಾಯಗಳ ಬಗ್ಗೆ ಮಾತನಾಡಲು ಕೆಲಸ ತೊರೆದಿದ್ದೇನೆ. ಆದರೆ ಈ ವಿಚಾರದಲ್ಲಿ ಗೂಗಲ್ ತುಂಬಾ ಜವಾಬ್ದಾರಿಯುತವಾಗಿ ವರ್ತಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಹೊಸ ಎಐ ಆಧರಿತ ಚಾಟ್ಬಾಟ್ಗಳು ತಪ್ಪು ಮಾಹಿತಿಯನ್ನು ಹರಡುತ್ತಿವೆ ಹಾಗೂ ಅವುಗಳಿಂದ ನಿರುದ್ಯೋಗ ಹೆಚ್ಚಾಗಬಹುದು ಎಂಬ ಕಾರಣದಿಂದ ಹಲವಾರು ರಾಜಕಾರಣಿಗಳು, ಮಾನವ ಹಕ್ಕು ಗುಂಪುಗಳು ಹಾಗೂ ತಂತ್ರಜ್ಞರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಹಿಂಟನ್ ಕೈಗೊಂಡಿರುವ ಕ್ರಮ ಗಮನಾರ್ಹವಾಗಿದೆ.
ಕಳೆದ ವರ್ಷಾಂತ್ಯಕ್ಕೆ ಆರಂಭವಾದ ಚಾಟ್ ಜಿಪಿಟಿ ತಂತ್ರಜ್ಞಾನದ ರೇಸ್ನಲ್ಲಿ ಈಗಾಗಲೇ ಹಲವಾರು ಬೃಹತ್ ತಂತ್ರಜ್ಞಾನ ಕಂಪನಿಗಳು ಧುಮುಕಿವೆ. ಇವು ತಮ್ಮ ಸಾಫ್ಟವೇರ್ ಆ್ಯಪ್ಗಳಲ್ಲಿ ಎಐ ಅನ್ನು ಸಂಯೋಜನೆ ಮಾಡುವತ್ತ ಸಂಶೋಧನೆಗಳನ್ನು ನಡೆಸುತ್ತಿವೆ. ಈ ವಿಷಯದಲ್ಲಿ ಓಪನ್ ಎಐ, ಮೈಕ್ರೊಸಾಫ್ಟ್ ಮತ್ತು ಗೂಗಲ್ ಕಂಪನಿಗಳು ಮುಂಚೂಣಿಯಲ್ಲಿವೆ. ಐಬಿಎಂ, ಬೈದು ಮತ್ತು ಟೆನ್ಸೆಂಟ್ಗಳು ಕೂಡ ಇಂಥದೇ ತಂತ್ರಜ್ಞಾನದ ಆವಿಷ್ಕಾರದಲ್ಲಿ ತೊಡಗಿವೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಇದು ಯಂತ್ರಗಳು, ವಿಶೇಷವಾಗಿ ಕಂಪ್ಯೂಟರ್ ವ್ಯವಸ್ಥೆಗಳಿಂದ ಮಾನವ ಬುದ್ಧಿವಂತಿಕೆಯ ಪ್ರಕ್ರಿಯೆಗಳ ಅನುಕರಣೆಯಾಗಿದೆ. AI ಯ ನಿರ್ದಿಷ್ಟ ಅಪ್ಲಿಕೇಶನ್‌ಗಳಲ್ಲಿ ಪರಿಣಿತ ವ್ಯವಸ್ಥೆಗಳು, ನೈಸರ್ಗಿಕ ಭಾಷಾ ಸಂಸ್ಕರಣೆ, ಮಾತಿನ ಗುರುತಿಸುವಿಕೆ ಮತ್ತು ಮಶೀನ್ ವಿಜನ್ ಸೇರಿವೆ. ಮಷಿನ್ ಲರ್ನಿಂಗ್ ಅಲ್ಗಾರಿದಮ್‌ಗಳನ್ನು ಬರೆಯಲು ಮತ್ತು ಅವುಗಳಿಗೆ ತರಬೇತಿ ನೀಡಲು AI ಗೆ ವಿಶೇಷವಾದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ನ ಅಡಿಪಾಯದ ಅಗತ್ಯವಿದೆ.
ಇದನ್ನೂ ಓದಿ : ಶೇ 80ರಷ್ಟು ಐಫೋನ್ ಗ್ರಾಹಕರ ಬಳಿಯಿದೆ ಆ್ಯಪಲ್ ಸ್ಮಾರ್ಟ್ವಾಚ್