ಕರ್ನಾಟಕ

karnataka

ETV Bharat / science-and-technology

ದೀರ್ಘಾವಧಿಯ ವೀಡಿಯೊ ಕಾನ್ಫರೆನ್ಸಿಂಗ್​ನಿಂದ ಹೃದಯ, ಮೆದುಳಿಗೆ ಹಾನಿ: ವಿಜ್ಞಾನಿಗಳ ಎಚ್ಚರಿಕೆ - ಈಟಿವಿ ಭಾರತ ಕನ್ನಡ

Virtual meetings are dangerous for brain and heart: ದೀರ್ಘಾವಧಿಯ ವರ್ಚುವಲ್ ಮೀಟಿಂಗ್​ಗಳಿಂದ ಮಾನವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿ ಹೇಳಿದೆ.

Scientists say virtual meetings on Google Meet, Zoom and Teams are dangerous for brain and heart
Scientists say virtual meetings on Google Meet, Zoom and Teams are dangerous for brain and heart

By ETV Bharat Karnataka Team

Published : Nov 26, 2023, 12:10 PM IST

ಕೋವಿಡ್ -19 ಸಾಂಕ್ರಾಮಿಕ ರೋಗದ ಅವಧಿಯ ನಂತರ ವರ್ಚುವಲ್ ಆಗಿ ಸಂಪರ್ಕ ನಡೆಸುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜೂಮ್, ಟೀಮ್ಸ್ ಮತ್ತು ಗೂಗಲ್ ಮೀಟ್‌ನಂತಹ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್ ಫಾರ್ಮ್ ಗಳು ನಾವು ನಮ್ಮ ವ್ಯವಹಾರ ನಡೆಸುವ, ಶಿಕ್ಷಣ ಪಡೆಯುವ ಮತ್ತು ಸಾಮಾಜಿಕ ಸಂಪರ್ಕಗಳನ್ನು ನಿರ್ವಹಿಸುವ ವಿಧಾನವನ್ನೇ ಬದಲಾಯಿಸುತ್ತಿವೆ.

ಆದಾಗ್ಯೂ, ನಾವು ಇಂಥ ವರ್ಚುವಲ್ ಪ್ಲಾಟ್​ಫಾರ್ಮ್​ಗಳನ್ನು ಅತಿ ಹೆಚ್ಚಾಗಿ ಅವಲಂಬಿಸುವುದರಿಂದ ನಮ್ಮ ಒಟ್ಟಾರೆ ಯೋಗಕ್ಷೇಮದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ವರ್ಚುವಲ್​ ಸಂವಹನಗಳು ಮಾನವರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂಬುದನ್ನು ಹಲವಾರು ಅಧ್ಯಯನಗಳು ಎತ್ತಿ ತೋರಿಸಿವೆ. ಅತಿಯಾದ ವೀಡಿಯೊ ಕಾನ್ಫರೆನ್ಸಿಂಗ್ ನಮ್ಮ ಮಾನಸಿಕ ಮತ್ತು ದೈಹಿಕ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಅದರಲ್ಲೂ ಮೆದುಳು ಮತ್ತು ಹೃದಯದ ಮೇಲೆ ಹೆಚ್ಚಿನ ದುಷ್ಪರಿಣಾಮವಾಗಬಹುದು ಎಂದು ತಿಳಿದು ಬಂದಿದೆ.

ಸೈನ್ಸ್​ ಜರ್ನಲ್ ನೇಚರ್‌ನಲ್ಲಿ ಪ್ರಕಟವಾದ ಇತ್ತೀಚಿನ ವೈಜ್ಞಾನಿಕ ವರದಿಯಲ್ಲಿ, ಮುಖಾಮುಖಿ ಸಂಭಾಷಣೆಗಳಿಗಿಂತ ವೀಡಿಯೊ ಕಾನ್ಫರೆನ್ಸಿಂಗ್ ಸಂಭಾಷಣೆಗಳು ಹೆಚ್ಚು ಆಯಾಸ ಉಂಟು ಮಾಡುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಬಗ್ಗೆ ಅಕ್ಟೋಬರ್​ನಲ್ಲಿ ಆಸ್ಟ್ರಿಯಾದ ಸಂಶೋಧಕರ ತಂಡ ಅಧ್ಯಯನವೊಂದನ್ನು ನಡೆಸಿದೆ. ಸಂಶೋಧನೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ 35 ವಿದ್ಯಾರ್ಥಿಗಳ ತಲೆ ಮತ್ತು ಎದೆಗಳ ಮೇಲೆ ಎಲೆಕ್ಟ್ರೋಡ್​ಗಳನ್ನು ಜೋಡಿಸುವ ಮೂಲಕ ಅವರ ಮೆದುಳು ಮತ್ತು ಹೃದಯದ ಚಟುವಟಿಕೆಯನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ.

ನ್ಯೂರೋಫಿಸಿಯೋಲಾಜಿಕಲ್ ದೃಷ್ಟಿಕೋನದಿಂದ ವೀಡಿಯೊ ಕಾನ್ಫರೆನ್ಸ್ ಆಯಾಸ (ವಿಸಿಎಫ್) ವಿದ್ಯಮಾನವನ್ನು ಪರೀಕ್ಷಿಸಲು ಈ ಅಧ್ಯಯನ ನಡೆಸಲಾಗಿದೆ. ಮಾನವ ಮೆದುಳಿನ ಮೇಲೆ ವೀಡಿಯೊ ಕಾನ್ಫರೆನ್ಸ್ ಆಯಾಸ ಪರಿಣಾಮದ ಬಗ್ಗೆ ಅಧ್ಯಯನದಲ್ಲಿ ವಿಶೇಷವಾಗಿ ಗಮನಹರಿಸಲಾಗಿದೆ. 50 ನಿಮಿಷಗಳ ವೀಡಿಯೊ ಕಾನ್ಫರೆನ್ಸಿಂಗ್ ಸೆಷನ್​​ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಮೆದುಳು ಮತ್ತು ಹೃದಯವನ್ನು ಸ್ಕ್ಯಾನ್ ಮಾಡಿದಾಗ ಅವರ ನರಮಂಡಲ ವ್ಯವಸ್ಥೆಯಲ್ಲಿ ಬದಲಾವಣೆಯಾಗಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಈ ವಿದ್ಯಾರ್ಥಿಗಳು ಹೆಚ್ಚಿನ ಆಯಾಸ ಹೊಂದಿದ್ದು, ಇವರ ಏಕಾಗ್ರತೆ ಸಾಮರ್ಥ್ಯ ಕುಸಿದಿರುವುದು ಕಂಡು ಬಂದಿದೆ. ಅಂದರೆ ವೀಡಿಯೊ ಕಾನ್ಫರೆನ್ಸಿಂಗ್​ ಸಮಯದಲ್ಲಿ ಮಾನವರು ಅತಿ ಹೆಚ್ಚಿನ ಪ್ರಮಾಣದ ಅರಿವಿನಿಂದ ಇರಬೇಕಾಗುತ್ತದೆ ಹಾಗೂ ಇದು ಹೃದಯದ ಮೇಲೆ ಒತ್ತಡ ಉಂಟು ಮಾಡುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಹೃದಯ ಬಡಿತದಲ್ಲಿನ ವ್ಯತ್ಯಾಸವು ಇದನ್ನು ನಿರೂಪಿಸಿದೆ.

ಮುಖಾಮುಖಿ ಸಂಭಾಷಣೆಗೆ ಹೋಲಿಸಿದರೆ ವೀಡಿಯೊ ಕಾನ್ಫರೆನ್ಸಿಂಗ್ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಗಮನಾರ್ಹವಾಗಿ ಹೆಚ್ಚು ಆಯಾಸ, ದಣಿವು, ಮಂಪರು ಮತ್ತು ಬೇಸರವನ್ನು ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಬಹುತೇಕರ ಮನಸ್ಥಿತಿ ಕೂಡ ಹದಗೆಟ್ಟಿರುವುದು ಕಂಡು ಬಂದಿದೆ. ಕಂಪನಿಗಳು ಅತಿಯಾಗಿ ವೀಡಿಯೊ ಕಾನ್ಫರೆನ್ಸಿಂಗ್ ಅನ್ನು ಅವಲಂಬಿಸುವ ಬದಲು ಸಂವಹನಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಮತ್ತು ಕನಿಷ್ಠ 30 ನಿಮಿಷಕ್ಕೊಮ್ಮೆ ಕಾನ್ಫರೆನ್ಸಿಂಗ್ ವೇಳೆ ಬಿಡುವು ತೆಗೆದುಕೊಳ್ಳುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವಾಟ್ಸ್​ಆ್ಯಪ್ ವೆಬ್​ನಲ್ಲಿ ಸ್ಕ್ರೀನ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಕ್ವಿಕ್ ಗೈಡ್

ABOUT THE AUTHOR

...view details