ಬೆಂಗಳೂರು: ಬಳಕೆದಾರರ ವಿಳಾಸಗಳು, ಫೋನ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪ್ಯಾನ್ ಕಾರ್ಡ್‌ಗಳು, ಬ್ಯಾಂಕ್ ಖಾತೆ ವಿವರಗಳು, ಸಂಬಳ ಮತ್ತು ಆದಾಯ ತೆರಿಗೆ ಪಾವತಿಗಳು ಇಂದು ಮಾರಾಟದ ಸರಕುಗಳಾಗುತ್ತಿವೆ. ಸೈಬರ್ ಕ್ರಿಮಿನಲ್‌ಗಳು ಜನರ ಸೂಕ್ಷ್ಮ ಮಾಹಿತಿಯನ್ನು ಕದ್ದು ಲಾಭ ಪಡೆಯುವ ಹಲವಾರು ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದಿವೆ. ಹ್ಯಾಕರ್ಗಳು ನಿರಂತರವಾಗಿ ವೈಯಕ್ತಿಕ ಗೌಪ್ಯತೆಯನ್ನು ಕದಿಯುತ್ತಿದ್ದಾರೆ. ಇದನ್ನು ನಾಗರಿಕರ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.
ಪ್ರಸ್ತುತ ಜನರ ವೈಯಕ್ತಿಕ ಡಿಜಿಟಲ್ ಡೇಟಾವನ್ನು ಸಂರಕ್ಷಿಸುವ ಮೂಲಕ ವ್ಯಕ್ತಿಗಳ ಘನತೆಯನ್ನು ಎತ್ತಿಹಿಡಿಯುವಂಥ ಸಮರ್ಥ ಶಾಸನವನ್ನು ದೇಶ ಹೊಂದಿಲ್ಲ. ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯಿದೆಯ ಕರಡು ಐದು ವರ್ಷಗಳಿಂದ ಚರ್ಚೆಯಲ್ಲಿದೆ ಆದರೂ ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಕೇಂದ್ರವು ಇತ್ತೀಚಿನ 'ಡಿಜಿಟಲ್ ಡೇಟಾ ಪ್ರೊಟೆಕ್ಷನ್ (ಡಿಡಿಪಿ) ಮಸೂದೆ'ಯ ಕರಡನ್ನು ಸಿದ್ಧಪಡಿಸಿತ್ತು ಮತ್ತು ಕಳೆದ ವರ್ಷ ಅದರ ಬಗ್ಗೆ ಸಲಹೆ ಮತ್ತು ಕಾಮೆಂಟ್‌ಗಳನ್ನು ಆಹ್ವಾನಿಸಿತ್ತು.
ಇತ್ತೀಚೆಗಷ್ಟೇ ಸಂಪುಟದಲ್ಲಿ ಈ ಮಸೂದೆಗೆ ಅನುಮೋದನೆ ದೊರೆತಿದ್ದು, ಮುಂಬರುವ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಕರಡು ಶಾಸನದ ಪ್ರಕಾರ, ಡೇಟಾ ಕಳ್ಳತನವನ್ನು ತಡೆಯಲು ವಿಫಲವಾದ ಕಂಪನಿಗಳಿಗೆ 250 ಕೋಟಿ ರೂ.ವರೆಗೆ ದಂಡ ವಿಧಿಸಬಹುದು. ಆದಾಗ್ಯೂ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಈ ನಿಯಮದಲ್ಲಿ ವಿನಾಯಿತಿ ನೀಡುವ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿವೆ.
ಏತನ್ಮಧ್ಯೆ ‘ಡಿಡಿಪಿ’ ಮಸೂದೆಯು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ವಿವಾದಗಳನ್ನು ಪರಿಹರಿಸುವ ಜವಾಬ್ದಾರಿ ಹೊಂದಿರುವ 'ದತ್ತಾಂಶ ಸಂರಕ್ಷಣಾ ಮಂಡಳಿ'ಯ ಸ್ವಾತಂತ್ರ್ಯದ ಬಗ್ಗೆಯೂ ಅನುಮಾನಗಳಿವೆ. ಜನಾಭಿಪ್ರಾಯ ಸಂಗ್ರಹಣೆಯ ಸಂದರ್ಭದಲ್ಲಿ ಉಂಟಾದ ಕಳವಳಗಳನ್ನು ಸಮರ್ಪಕವಾಗಿ ಪರಿಹರಿಸದೇ ಡಿಡಿಪಿ ಮಸೂದೆಯನ್ನು ಕಾನೂನಾಗಿ ಜಾರಿಗೆ ತರಲು ಕೇಂದ್ರವು ಸಿದ್ಧತೆ ನಡೆಸುತ್ತಿದೆ ಎಂದು ವರದಿಗಳು ಸೂಚಿಸುತ್ತವೆ.
ಇತ್ತೀಚಿನ ಅಂತಾರಾಷ್ಟ್ರೀಯ ಅಧ್ಯಯನದ ಪ್ರಕಾರ, ಡೇಟಾ ಕಳ್ಳತನ ಹೆಚ್ಚಾಗಿರುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ದೇಶೀಯವಾಗಿ ಆರೋಗ್ಯ ಮತ್ತು ರಿಟೇಲ್ ಕ್ಷೇತ್ರಗಳು ಸೈಬರ್ ಅಪರಾಧಿಗಳಿಂದ ಹೆಚ್ಚು ಪ್ರಭಾವಿತವಾಗಿವೆ. ಇದರಂತೆ ಹಣಕಾಸು, ಶೈಕ್ಷಣಿಕ, ವೃತ್ತಿಪರ-ತಾಂತ್ರಿಕ ಮತ್ತು ಸಾರ್ವಜನಿಕ ಆಡಳಿತ ಕ್ಷೇತ್ರಗಳಲ್ಲಿನ ಸಂಸ್ಥೆಗಳು ಮತ್ತು ಕಚೇರಿಗಳು ಡಿಜಿಟಲ್ ದಾಳಿಗೆ ಹೆಚ್ಚು ಗುರಿಯಾಗುತ್ತಿವೆ.
ಡಿಜಿಟಲ್ ಇಂಡಿಯಾ'ದ ಗುರಿ ಈಡೇರಿಕೆಗೆ ಪ್ರೊಟೆಕ್ಷನ್ ಅಗತ್ಯ: ಅತ್ಯಧಿಕ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ದೆಹಲಿಯ ಏಮ್ಸ್ ಅನ್ನು ಗುರಿಯಾಗಿಟ್ಟುಕೊಂಡು ಕಳೆದ ವರ್ಷ ನಡೆದ ಹ್ಯಾಕಿಂಗ್ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. 2022 ರಲ್ಲಿ ಮೂರು ಕೋಟಿ ರೈಲ್ವೆ ಪ್ರಯಾಣಿಕರ ವಿವರಗಳು ಡಾರ್ಕ್ ವೆಬ್‌ನಲ್ಲಿ ಕಾಣಿಸಿಕೊಂಡವು. ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ಗ್ಯಾಂಗ್ ಸುಮಾರು 17 ಕೋಟಿ ಜನರ ಮಾಹಿತಿಯನ್ನು ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದೆ. ಅದಾಗಿ ಕೆಲ ದಿನಗಳ ನಂತರ ತೆಲಂಗಾಣ ಪೊಲೀಸರು ಸುಮಾರು 67 ಕೋಟಿ ಭಾರತೀಯರ ವೈಯಕ್ತಿಕ ವಿವರಗಳನ್ನು ಮಾರಾಟ ಮಾಡುವ ಸೈಬರ್ ಕಳ್ಳರ ಗುಂಪನ್ನು ಭೇದಿಸಿದ್ದರು. ಹೀಗಾಗಿ 'ಡಿಜಿಟಲ್ ಇಂಡಿಯಾ'ದ ಗುರಿಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸೈಬರ್ ಭದ್ರತೆಯಲ್ಲಿ ಜನರ ವಿಶ್ವಾಸ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ.
ಜನರು ವಿವಿಧ ಉದ್ದೇಶಗಳಿಗಾಗಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮಾಹಿತಿಯು ದುರುಪಯೋಗವಾಗುವುದಿಲ್ಲ ಎಂದು ಅವರಿಗೆ ಭರವಸೆ ನೀಡಬೇಕಿದೆ. ಈ ನಿಟ್ಟಿನಲ್ಲಿ 157 ದೇಶಗಳು ಸೈಬರ್‌ಸ್ಪೇಸ್‌ನಲ್ಲಿ ತಮ್ಮ ನಾಗರಿಕರ ಗೌಪ್ಯತೆ ರಕ್ಷಿಸಲು ವಿಶೇಷ ಕಾನೂನುಗಳನ್ನು ಜಾರಿಗೆ ತಂದಿವೆ. ಸುಮಾರು 80 ಕೋಟಿ ಇಂಟರ್ನೆಟ್ ಬಳಕೆದಾರರಿರುವ ಭಾರತದಲ್ಲಿ ಇಂಥ ಕಾನೂನು ಇಲ್ಲದಿರುವುದು ಸೈಬರ್ ಅಪರಾಧಿಗಳಿಗೆ ದೊಡ್ಡ ವರವಾಗಿದೆ. ಬಳಕೆದಾರರ ವಿವರಗಳನ್ನು ವಿವೇಚನೆಯಿಲ್ಲದೇ ಸಂಗ್ರಹಿಸುವ ವಿವಿಧ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಅವುಗಳನ್ನು ಸುರಕ್ಷಿತವಾಗಿಡಲು ವಿಫಲವಾಗಿವೆ.
ದತ್ತಾಂಶ ಸಂಗ್ರಹಿಸುವವರನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಲು ಮತ್ತು ಜನರ ಆರ್ಥಿಕ ಮತ್ತು ವೈಯಕ್ತಿಕ ರಕ್ಷಣೆಯನ್ನು ಕಾಪಾಡಲು ಡಿಜಿಟಲ್ ಡೇಟಾ ಸಂರಕ್ಷಣಾ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕಿದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನುಬದ್ಧ ಸರ್ಕಾರಿ ಜವಾಬ್ದಾರಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ; ಇಲ್ಲದಿದ್ದರೆ, ಪ್ರಸ್ತಾವಿತ ಶಾಸನದ ಆತ್ಮವನ್ನು ದುರ್ಬಲಗೊಳಿಸಿದಂತಾಗುತ್ತದೆ.
ಇದನ್ನೂ ಓದಿ : ಗೂಗಲ್ನ Med-PaLM 2: ಇದು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ AI