ಕರ್ನಾಟಕ

karnataka

ETV Bharat / science-and-technology

Cyber Security: ​ಫೋನ್​ಗಳಲ್ಲಿ ರಹಸ್ಯವಾಗಿ ವೈರಸ್ ಇನ್​ಸ್ಟಾಲ್ ಮಾಡುವ 60 ಸಾವಿರ ಆ್ಯಪ್ ಪತ್ತೆ - ನಕಲಿ ಭದ್ರತಾ ಸಾಫ್ಟ್‌ವೇರ್

ಕಳೆದ ಕೆಲ ತಿಂಗಳ ಅವಧಿಯಲ್ಲಿ ಸಾವಿರಾರು ನಕಲಿ ಆ್ಯಪ್​ಗಳು ಬಳಕೆದಾರರ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ವೈರಸ್​ ಮಾದರಿಯ ಆಡ್​ವೇರ್​ಗಳನ್ನು ಇನ್​ಸ್ಟಾಲ್ ಮಾಡಿವೆ ಎಂದು ವರದಿ ಹೇಳಿದೆ.

Over 60K Android apps found secretly installing
Over 60K Android apps found secretly installing

By

Published : Jun 12, 2023, 4:33 PM IST

ಸ್ಯಾನ್ ಫ್ರಾನ್ಸಿಸ್ಕೋ : ಕಳೆದ ಆರು ತಿಂಗಳಿನಿಂದ 60,000 ಕ್ಕೂ ಹೆಚ್ಚು ಅಸಲಿಯಂತೆ ಕಾಣುವ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಬಳಕೆದಾರರ ಮೊಬೈಲ್ ಸಾಧನಗಳಲ್ಲಿ ಆಡ್‌ವೇರ್ ಅನ್ನು ಅವರಿಗೆ ಗೊತ್ತಾಗದಂತೆ ಇನ್​ಸ್ಟಾಲ್ ಮಾಡಿವೆ. ಸೈಬರ್‌ ಸೆಕ್ಯುರಿಟಿ ಸಂಸ್ಥೆ ಬಿಟ್‌ಡೆಫೆಂಡರ್ ಪ್ರಕಾರ, ಇಲ್ಲಿಯವರೆಗೆ ಅದು ಆಡ್​ವೇರ್​ ಅನ್ನು ಇನ್​ಸ್ಟಾಲ್ ಮಾಡುವ 60,000 ಸಂಪೂರ್ಣವಾಗಿ ವಿಭಿನ್ನ ಮಾದರಿಗಳನ್ನು (ಅನನ್ಯ ಅಪ್ಲಿಕೇಶನ್‌ಗಳು) ಕಂಡುಹಿಡಿದಿದೆ ಮತ್ತು ಗೊತ್ತಾಗದೇ ಇರುವ ಇನ್ನೂ ಅದೆಷ್ಟೋ ಆಡ್​ವೇರ್ ಮಾದರಿಗಳಿವೆ ಎಂದು ಹೇಳಿದೆ.

ಅಕ್ಟೋಬರ್ 2022 ರಲ್ಲಿ ಪ್ರಾರಂಭವಾದ ಇಂಥ ಅಭಿಯಾನವು ನಕಲಿ ಭದ್ರತಾ ಸಾಫ್ಟ್‌ವೇರ್, ಗೇಮ್ ಕ್ರಾಕ್ಸ್, ಚೀಟ್ಸ್, VPN ಸಾಫ್ಟ್‌ವೇರ್, ನೆಟ್‌ಫ್ಲಿಕ್ಸ್ ಮತ್ತು ಯುಟಿಲಿಟಿ ಅಪ್ಲಿಕೇಶನ್‌ಗಳನ್ನು ಥರ್ಡ್ ಪಾರ್ಟಿ ಸೈಟ್‌ಗಳ ಮೂಲಕ ಇನ್​ಸ್ಟಾಲ್ ಮಾಡಿದೆ. ಮುಖ್ಯವಾಗಿ ಅಮೆರಿಕದ ಬಳಕೆದಾರರು ಇಂಥ ದುಷ್ಕೃತ್ಯಕ್ಕೆ ಹೆಚ್ಚು ಬಲಿಯಾಗಿದ್ದಾರೆ. ಇದರ ನಂತರ ದಕ್ಷಿಣ ಕೊರಿಯಾ, ಬ್ರೆಜಿಲ್, ಜರ್ಮನಿ, ಯುಕೆ ಮತ್ತು ಫ್ರಾನ್ಸ್​ಗಳ ಬಳಕೆದಾರರನ್ನು ಗುರಿಯಾಗಿಸಿಕೊಳ್ಳಲಾಗಿದೆ.

ಇದಲ್ಲದೆ, ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಗೂಗಲ್ ಹುಡುಕಾಟದಲ್ಲಿ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳಲ್ಲಿ ಹೋಸ್ಟ್ ಮಾಡಲಾಗಿದೆ ಎಂದು ವರದಿಯು ತೋರಿಸಿದೆ. ಈ ಮೂಲಕ APK ಗಳನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಗೂಗಲ್ ಪ್ಲೇ ಇಲ್ಲದೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಹೊರಗಿನಿಂದಲೇ ಇನ್​ಸ್ಟಾಲ್ ಮಾಡಿಕೊಳ್ಳಲು ಎಪಿಕೆಗಳು ಸಹಾಯ ಮಾಡುತ್ತವೆ.

ಬಳಕೆದಾರರು ಸೈಟ್‌ಗಳಿಗೆ ಭೇಟಿ ನೀಡಿದಾಗ ಅವರನ್ನು ಜಾಹೀರಾತುಗಳಿಗೆ ಮರುನಿರ್ದೇಶಿಸಲಾಗುತ್ತದೆ ಅಥವಾ ಅವರು ಹುಡುಕುತ್ತಿರುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಪ್ರೇರೇಪಿಸಲಾಗುತ್ತದೆ. ಡೌನ್‌ಲೋಡ್ ಸೈಟ್‌ಗಳನ್ನು ನಿರ್ದಿಷ್ಟವಾಗಿ ದುರುದ್ದೇಶಪೂರಿತ ಆ್ಯಂಡ್ರಾಯ್ಡ್​ ಅಪ್ಲಿಕೇಶನ್‌ಗಳನ್ನು APK ಗಳಾಗಿ ವಿತರಿಸಲು ವಿನ್ಯಾಸಗೊಳಿಸಲಾಗಿದೆ. ಹೀಗೆ ಎಪಿಕೆಯನ್ನು ಇನ್​ಸ್ಟಾಲ್ ಮಾಡಿದಾಗ ಆಡ್‌ವೇರ್‌ನೊಂದಿಗೆ ಆ್ಯಂಡ್ರಾಯ್ಡ್​ ಸಾಧನಗಳಲ್ಲಿ ವೈರಸ್ ನುಸುಳುತ್ತದೆ ಎಂದು ವರದಿ ಹೇಳಿದೆ.

ಏತನ್ಮಧ್ಯೆ, Google Chrome ವೆಬ್ ಸ್ಟೋರ್‌ನಿಂದ 75 ಮಿಲಿಯನ್​ ಸಂಖ್ಯೆಯಷ್ಟು ಡೌನ್ಲೋಡ್ ಆದ 32 ದುರುದ್ದೇಶಪೂರಿತ extensions ಗಳನ್ನು ತೆಗೆದುಹಾಕಿದೆ. ಈ extensions ಗಳು ಸರ್ಚ್ ಫಲಿತಾಂಶಗಳನ್ನು ಬದಲಾಯಿಸಬಹುದು ಮತ್ತು ಸ್ಪ್ಯಾಮ್ ಅಥವಾ ಅನಗತ್ಯ ಜಾಹೀರಾತುಗಳನ್ನು ಬಳಕೆದಾರರಿಗೆ ತೋರಿಸಬಹುದು.

ಕಂಪ್ಯೂಟರ್‌ಗಳು, ಸರ್ವರ್‌ಗಳು, ಮೊಬೈಲ್ ಸಾಧನಗಳು, ಎಲೆಕ್ಟ್ರಾನಿಕ್ ಸಿಸ್ಟಮ್‌ಗಳು, ನೆಟ್‌ವರ್ಕ್‌ಗಳು ಮತ್ತು ಡೇಟಾವನ್ನು ದುರುದ್ದೇಶಪೂರಿತ ದಾಳಿಯಿಂದ ರಕ್ಷಿಸುವ ಕ್ರಮವೇ ಸೈಬರ್ ಭದ್ರತೆಯಾಗಿದೆ. ಇದನ್ನು ಮಾಹಿತಿ ತಂತ್ರಜ್ಞಾನ ಭದ್ರತೆ ಅಥವಾ ಎಲೆಕ್ಟ್ರಾನಿಕ್ ಮಾಹಿತಿ ಭದ್ರತೆ ಎಂದೂ ಕರೆಯಲಾಗುತ್ತದೆ. ಜಾಗತಿಕ ಸೈಬರ್ ಸೆಕ್ಯೂರಿಟಿಗೆ ಬೆದರಿಕೆಯು ತ್ವರಿತ ಗತಿಯಲ್ಲಿ ಹೆಚ್ಚಾಗುತ್ತಲೇ ಇದೆ.

ಸೈಬರ್ ಬೆದರಿಕೆಯ ಪ್ರಮಾಣವು ಹೆಚ್ಚುತ್ತಲೇ ಇರುವುದರಿಂದ, ಸೈಬರ್‌ ಸೆಕ್ಯುರಿಟಿ ಪರಿಹಾರಗಳ ಮೇಲಿನ ಜಾಗತಿಕ ಖರ್ಚು ಸ್ವಾಭಾವಿಕವಾಗಿ ಹೆಚ್ಚುತ್ತಿದೆ. 2023 ರಲ್ಲಿ ಸೈಬರ್ ಸೆಕ್ಯುರಿಟಿ ಖರ್ಚು 188.3 ಬಿಲಿಯನ್ ಡಾಲರ್ ತಲುಪಲಿದೆ ಮತ್ತು 2026 ರ ವೇಳೆಗೆ ಜಾಗತಿಕವಾಗಿ 260 ಶತಕೋಟಿ ಡಾಲರ್ ಮೀರಲಿದೆ ಎಂದು ಗಾರ್ಟ್ನರ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ : Internet apocalypse: ಸೌರ ಚಂಡಮಾರುತದಿಂದ ಇಂಟರ್​ನೆಟ್​ ಸ್ಥಗಿತದ ಆತಂಕ, ಇದಕ್ಕೇನು ಪರಿಹಾರ?

ABOUT THE AUTHOR

...view details