ನವದೆಹಲಿ: ಇಂದಿನ ದಿನಮಾನದಲ್ಲಿ ತಂತ್ರಜ್ಞಾನವು ಅಗಾಧ ಬೆಳವಣಿಗೆ ಸಾಧಿಸಿದೆ. ದಿನನಿತ್ಯದ ಕೆಲಸ ಕಾರ್ಯಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಹೊಸ ತಾಂತ್ರಿಕ ಅನ್ವೇಷಣೆಗಳು ನಡೆಯುತ್ತಲೇ ಇವೆ. ಫೇಸ್ ಸ್ವೈಪ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು ಇಂಥದೇ ಒಂದು ತಂತ್ರಜ್ಞಾನವಾಗಿದೆ. ಆದರೆ ಈಗ ಸೈಬರ್ ವಂಚಕರು ಈ ತಂತ್ರಜ್ಞಾನವನ್ನು ಬಳಸಿಕೊಂಡು ವಂಚನೆಯ ಕೃತ್ಯಗಳನ್ನು ಎಸಗುತ್ತಿದ್ದಾರೆ. ಈ ಮುನ್ನ ಸೈಬರ್ ಕಳ್ಳರು ನಿಮ್ಮ ಪರಿಚಯದವರಿಗೆ, ಬಂಧು ಮಿತ್ರರಿಗೆ ಕರೆ ಮಾಡಿ ನಿಮ್ಮದೇ ಅನಿಸುವ ಧ್ವನಿಯಲ್ಲಿ ಮಾತನಾಡಿ ಅವರಿಂದ ಹಣ ಕೀಳುತ್ತಿದ್ದರು. ಆದರೆ ವಂಚನೆಯ ಈ ಮಾರ್ಗ ಈಗ ಹಳೆಯದಾಗಿದೆ. ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೇಸ್ ಸ್ವೈಪಿಂಗ್ ತಂತ್ರಜ್ಞಾನದ ಮೂಲಕ ವೀಡಿಯೊ ಕಾಲ್ ಮಾಡಿ ಹಣ ದೋಚುವ ಹೊಸ ದಂಧೆ ಆರಂಭವಾಗಿದೆ.
ಡೀಪ್ ಫೇಕ್ ಚಿತ್ರಗಳು, ವಿಡಿಯೋ ಪರಿಕರಗಳಿಂದ ಆನ್ಲೈನ್ ವಂಚನೆ: ಪ್ರಪಂಚದಾದ್ಯಂತದ ಜನರು ತಮ್ಮ ಜೀವನವನ್ನು ಸುಲಭಗೊಳಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಅವುಗಳಲ್ಲಿ ಒಂದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಕ್ರಾಂತಿಕಾರಿ ತಂತ್ರಜ್ಞಾನವೆಂದು ಪರಿಗಣಿಸಲಾಗಿದೆ. ಆದರೆ ಸೈಬರ್ ಅಪರಾಧಿಗಳು ಈ ತಂತ್ರಜ್ಞಾನವನ್ನು ಸಹ ದುರುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಡೀಪ್ ಫೇಕ್ ಇಮೇಜ್ಗಳು ಮತ್ತು ವೀಡಿಯೊ ಪರಿಕರಗಳು ಆನ್ ಲೈನ್ ವಂಚನೆಯ ಪ್ರಮುಖ ಮೂಲವಾಗಿದೆ. ಇದರಿಂದಾಗಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ.
ಈವರೆಗೆ 6 ಪ್ರಕರಣ: ಫೇಸ್ ಸ್ವ್ಯಾಪಿಂಗ್ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಸೈಬರ್ ಅಪರಾಧಿಗಳು ಜನರ ಹಣವನ್ನು ದೋಚುತ್ತಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಈ ತಂತ್ರದಿಂದ 5 ವಂಚನೆ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿದೆ. ಗುರುಗ್ರಾಮದಲ್ಲಿ ಕೂಡ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಂಚನೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.