ಕ್ರಿಪ್ಟೋಕರೆನ್ಸಿಯನ್ನು ಬೇರೆ ಬೇರೆ ಜನ ಬೇರೆ ಬೇರೆ ರೀತಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಇದೊಂದು ಊಹಾಪೋಹ, ಗೊಂದಲದ ಭಾವನೆಗಳನ್ನು ಉಂಟು ಮಾಡುವ ವಸ್ತುವಾಗಿದೆ. ತಾವು ಅತ್ಯಂತ ಶೀಘ್ರದಲ್ಲಿ ಶ್ರೀಮಂತರಾಗಲು ಕ್ರಿಪ್ಟೊಕರೆನ್ಸಿಯೇ (cryptocurrency) ಮಾರ್ಗವೆಂದು ಅನೇಕರು ನಂಬುತ್ತಾರೆ. ಇನ್ನು ಕೆಲವರು ಇದನ್ನು ಅವನತಿಯ ಹಾದಿ ಎಂದು ನಂಬುತ್ತಾರೆ.
ಪ್ರಪಂಚದ ಹೆಚ್ಚಿನ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗೆ ಯಾವ ರೀತಿಯಲ್ಲಿ ಕಾನೂನಿನ ಮಾನ್ಯತೆ ನೀಡಬೇಕೆಂಬ ವಿಷಯದಲ್ಲಿ ಇನ್ನೂವರೆಗೂ ಗೊಂದಲದಲ್ಲಿವೆ ಮತ್ತು ಅದರ ಬಗ್ಗೆ ಸ್ಪಷ್ಟತೆ ಹೊರಹೊಮ್ಮಿಲ್ಲ. ಕಳೆದ ವಾರವಷ್ಟೇ ಯುಎಸ್‌ನಲ್ಲಿನ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಬಿನಾನ್ಸ್ ಮತ್ತು ಕಾಯಿನ್‌ಬೇಸ್ ಈ ಎರಡು ಕ್ರಿಪ್ಟೊ ಎಕ್ಸ್‌ಚೇಂಜ್‌ಗಳ ವಿರುದ್ಧ ಬಹಳ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪರಿಸ್ಥಿತಿ ಹೀಗಿರುವಾಗ ಕ್ರಿಪ್ಟೊನಲ್ಲಿ ಹೂಡಿಕೆ ಮಾಡುವವರು ಎಚ್ಚರವಾಗಿರುವುದು ಒಳಿತು.
ಭಾರತಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಕ್ರಿಪ್ಟೋಗಳ ವಹಿವಾಟು ಚಾಲ್ತಿಯಲ್ಲಿದ್ದರೂ ಇದಕ್ಕೆ ಕಾನೂನಿನ ಮಾನ್ಯತೆ ನೀಡಲಾಗಿಲ್ಲ. ಆದರೆ ಹಾಗಂತ ಇದನ್ನು ಕಾನೂನು ಬಾಹಿರವೆಂದೂ ಘೋಷಿಸಲಾಗಿಲ್ಲ. ಭಾರತದಲ್ಲಿ ಕ್ರಿಪ್ಟೊ ಎಕ್ಸ್ಚೇಂಜ್ಗಳು ಕೆಲಸ ಮಾಡುತ್ತಿದ್ದರೂ ಅವುಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಹೀಗಾಗಿ ಏನೇ ಮೋಸ ವಂಚನೆ ಉಂಟಾದರೆ ಅದಕ್ಕೆ ಹೂಡಿಕೆದಾರರೇ ಬಾಧ್ಯಸ್ಥರಾಗಿರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಯಾವುದೇ ಕಾನೂನು ಕ್ರಮದ ಮೊರೆ ಹೋಗುವ ಅವಕಾಶಗಳು ಸದ್ಯಕ್ಕೆ ಭಾರತದಲ್ಲಿ ಇಲ್ಲ.
ತೆರಿಗೆ ಇಲಾಖೆಯು ಕ್ರಿಪ್ಟೋ ವ್ಯವಹಾರವನ್ನು (Crypto business) ಗೌರವಾನ್ವಿತ ಅಥವಾ ಹಣವನ್ನು ಗಳಿಸುವ ಅಥವಾ ಕಳೆದುಕೊಳ್ಳುವ ನ್ಯಾಯಯುತ ಮಾರ್ಗವೆಂದು ಪರಿಗಣಿಸುವುದಿಲ್ಲ. ಕ್ರಿಪ್ಟೋಕರೆನ್ಸಿಯನ್ನು ವಿನಿಮಯವಾಗಿ ಪಡೆದುಕೊಂಡು ನಿಷೇಧಿತ ಉತ್ಪನ್ನಗಳು ಮತ್ತು ಡ್ರಗ್ಸ್ಗಳನ್ನು ಮಾರಾಟ ಮಾಡುವ 'ಡಾರ್ಕ್ ನೆಟ್' ಸಹ ಇದೆ. ಕ್ರಿಪ್ಟೋಕರೆನ್ಸಿಗಳ ಬಳಕೆಯು ದೇಶಾದ್ಯಂತ ಲಂಚದ ಹಣ ಪಾವತಿ ಮತ್ತು ಭೂಗತ ಚಟುವಟಿಕೆಗಳನ್ನು ಸಹ ಸುಗಮಗೊಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ಸಮಯಗಳಲ್ಲಿ ಕ್ರಿಪ್ಟೋಕರೆನ್ಸಿಯ ಬಗ್ಗೆ ಚರ್ಚೆ ನಡೆಸಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕ್ರಿಪ್ಟೊಕರೆನ್ಸಿಗೆ ಮಾನ್ಯತೆ (Recognition of Cryptocurrency in India) ನೀಡುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಿರ್ಧರಿಸಲು ಇನ್ನೂ ಬಹಳ ಕಾಲ ಬೇಕಾಗಬಹುದು ಎನ್ನಲಾಗಿದೆ.