ನ್ಯೂಯಾರ್ಕ್ (ಅಮೆರಿಕ): ಮತ್ತಷ್ಟು ಸುಲಭವಾಗಿ ಮತ್ತು ಇನ್ನಷ್ಟು ಹೆಚ್ಚಿನ ಜನರಿಗೆ ಲಸಿಕೆಗಳು ಲಭ್ಯವಾಗಿದ್ದಲ್ಲಿ, 20 ಬಡ ರಾಷ್ಟ್ರಗಳಲ್ಲಿ ಕೋವಿಡ್-19ನಿಂದ ಸಂಭವಿಸಿದ ಮರಣ ಸಂಖ್ಯೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಬಹುದಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇತ್ತೀಚೆಗೆ ನಡೆಸಲಾದ ಅಧ್ಯಯನವೊಂದರಲ್ಲಿ ವಿಜ್ಞಾನಿಗಳು ಈ ವಿಷಯವನ್ನು ಕಂಡುಕೊಂಡಿದ್ದಾರೆ. ಅಮೆರಿಕದ ಜನತೆಗೆ ಸಿಕ್ಕಷ್ಟು ಪ್ರಮಾಣದ ಲಸಿಕೆಗಳು ಕೀನ್ಯಾ, ಅಫ್ಘಾನಿಸ್ತಾನ ಮತ್ತು ಬೊಲಿವಿಯಾ ಸೇರಿದಂತೆ 20 ಬಡ ರಾಷ್ಟ್ರಗಳ ಜನರಿಗೆ ಸಿಕ್ಕಿದ್ದರೆ ಅಂದಾಜು 5,18,000 ಸಾವುಗಳನ್ನು ತಪ್ಪಿಸಬಹುದಾಗಿತ್ತು ಎಂದು ನೇಚರ್ ಕಮ್ಯುನಿಕೇಷನ್ಸ್ (Nature Communications) ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.
ವ್ಯಾಕ್ಸಿನ್ ಸಿಗುವುದು ವಿಳಂಬವಾದ ಕಾರಣದಿಂದ ಹಲವಾರು ದೇಶಗಳು ಔಷಧರಹಿತವಾಗಿ ರೋಗ ನಿರ್ಮೂಲನೆ ಕ್ರಮಗಳನ್ನು ಕೈಗೊಳ್ಳಬೇಕಾಯಿತು. ಶಾಲೆ, ರೆಸ್ಟೊರೆಂಟ್ ಮತ್ತು ವ್ಯಾಪಾರಗಳನ್ನು ದೀರ್ಘಾವಧಿಯವರೆಗೆ ಬಂದ್ ಮಾಡುವುದು ಈ ಕ್ರಮಗಳಲ್ಲಿ ಸೇರಿವೆ. ಮುಂದುವರಿದ ದೇಶಗಳಿಗಿಂತ ಬಡ ದೇಶಗಳಲ್ಲಿ ಈ ಲಾಕ್ಡೌನ್ ಅವಧಿ ಹೆಚ್ಚಾಗಿತ್ತು ಎಂದು ಅಮೆರಿಕದ ನಾರ್ತ್ ಈಸ್ಟರ್ನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲೆಸ್ಸಾಂಡ್ರೊ ವೆಸ್ಪಿಗ್ನಾನಿ ಹೇಳಿದರು.
ಲಸಿಕೆಯ ಅಸಮಾನ ಹಂಚಿಕೆಯಿಂದ ಸಾವಿರಾರು ಲಕ್ಷ ಜೀವಗಳು ಕಳೆದುಹೋದವು ಎಂಬುದು ಬಹಳ ಕರುಣಾಜನಕ ಎಂದು ವೆಸ್ಪಿಗ್ನಾನಿ ಹೇಳಿದರು. ಅಧ್ಯಯನದಲ್ಲಿ, ವಿಜ್ಞಾನಿಗಳ ತಂಡವು ಕಂಪ್ಯೂಟೇಶನಲ್ ಎಪಿಡೆಮಿಕ್ ಮಾದರಿಯನ್ನು ಬಳಸಿಕೊಂಡು, ಯುಎಸ್ ಮತ್ತು ಇತರ ಹೆಚ್ಚಿನ ಆದಾಯದ ದೇಶಗಳು ಕೋವಿಡ್-19 ಲಸಿಕೆಯನ್ನು ಪಡೆದ ಸಮಯದಲ್ಲಿಯೇ 20 ಬಡರಾಷ್ಟ್ರಗಳಿಗೆ ಲಸಿಕೆ ಸಿಕ್ಕಿದ್ದಲ್ಲಿ ಈ ರಾಷ್ಟ್ರಗಳಲ್ಲಿ ಎಷ್ಟು ಸಾವುಗಳನ್ನು ತಪ್ಪಿಸಬಹುದಿತ್ತು ಎಂಬುದನ್ನು ಅಂದಾಜಿಸಿದೆ.
ಅಗತ್ಯವಿರುವಷ್ಟು ಲಸಿಕೆಗಳು ಲಭ್ಯವಾಗಿದ್ದರೆ ವಿಶ್ಲೇಷಿಸಿದ ದೇಶಗಳಲ್ಲಿ ಸಂಭವಿಸಿದ ಶೇಕಡಾ 50 ಕ್ಕಿಂತ ಹೆಚ್ಚು ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಅರ್ಧಕ್ಕಿಂತ ಹೆಚ್ಚು ದೇಶಗಳಲ್ಲಿ ಸಾವಿನ ಶೇಕಡಾವಾರು ಶೇಕಡಾವಾರು ಪ್ರಮಾಣ 70 ಕ್ಕಿಂತ ಹೆಚ್ಚಿದೆ. ಅಫ್ಘಾನಿಸ್ತಾನ ಮತ್ತು ಉಗಾಂಡಾದಲ್ಲಿ ಇದು ಶೇಕಡಾ 90 ಕ್ಕಿಂತ ಹೆಚ್ಚು ಎಂದು ವರದಿ ಹೇಳಿದೆ.