ವಾಷಿಂಗ್ಟನ್( ಅಮೆರಿಕ) : ಚೀನಾದ ಪ್ರಯೋಗಾಲಯದಿಂದಲೇ ಕೋವಿಡ್ -19 ವೈರಸ್ ಸೋರಿಕೆಯಾಗಿದೆ ಎಂದು ಅಮೆರಿಕ ಇಂಧನ ಇಲಾಖೆಯ ವರದಿ ತಿಳಿಸಿದೆ. ಈ ಕುರಿತಾದ ರಹಸ್ಯ ಗುಪ್ತಚರ ವರದಿಯನ್ನು (classified intelligence report) ಇತ್ತೀಚೆಗೆ ಶ್ವೇತಭವನ ಮತ್ತು ಕಾಂಗ್ರೆಸ್‌ನ ಪ್ರಮುಖ ಸದಸ್ಯರಿಗೆ ಒದಗಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್ ಸಾಂಕ್ರಾಮಿಕ ರೋಗದ ಮೂಲದ ಬಗ್ಗೆ ವಿಭಿನ್ನ ಗುಪ್ತಚರ ಸಂಸ್ಥೆಗಳು ಹೇಗೆ ವಿಭಿನ್ನ ತೀರ್ಪುಗಳನ್ನು ನೀಡಿವೆ ಎಂಬುದನ್ನು ಇದರಲ್ಲಿ ಎತ್ತಿ ತೋರಿಸಲಾಗಿದೆ.
ವರ್ಗೀಕೃತ ವರದಿಯನ್ನು ಓದಿದ ಜನರ ಪ್ರಕಾರ, ಇಂಧನ ಇಲಾಖೆಯು ಕಡಿಮೆ ವಿಶ್ವಾಸದಿಂದ ತನ್ನ ತೀರ್ಪು ನೀಡಿದೆ ಎನ್ನಲಾಗಿದೆ. ಪ್ರಯೋಗಾಲಯದಿಂದಲೇ ಕೋವಿಡ್ -19 ವೈರಸ್ ಸೋರಿಕೆಯಾಗಿದೆ ಎಂಬ ವಾದವನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸೇರಿದಂತೆ ಹಲವಾರು ಏಜೆನ್ಸಿಗಳು ಒಪ್ಪುತ್ತವೆ. ಕೋವಿಡ್ ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು 2021 ರಲ್ಲಿ ಇಂಧನ ಇಲಾಖೆ ತೀರ್ಮಾನಕ್ಕೆ ಬಂದಿತ್ತು ಮತ್ತು ಇಲಾಖೆ ಈವರೆಗೂ ಅದೇ ದೃಷ್ಟಿಕೋನವನ್ನು ಹೊಂದಿದೆ.
ನೈಸರ್ಗಿಕವಾಗಿ ಹರಡಿದೆ ಎಂದು ನಾಲ್ಕು ಏಜೆನ್ಸಿಗಳ ಹೇಳಿಕೆ:ಆದಾಗ್ಯೂ ರಾಷ್ಟ್ರೀಯ ಗುಪ್ತಚರ ಸಮಿತಿಯೊಂದಿಗೆ ಇತರ ನಾಲ್ಕು ಏಜೆನ್ಸಿಗಳು ಇದು ನೈಸರ್ಗಿಕವಾಗಿ ಹರಡಿದೆ ಎಂದು ಅಭಿಪ್ರಾಯಪಟ್ಟಿವೆ ಮತ್ತು ಇದರ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ಎರಡು ಏಜೆನ್ಸಿಗಳು ಹೇಳಿವೆ. ದೇಶದ ಅಧ್ಯಕ್ಷರ ನಿರ್ದೇಶನದಂತೆ ಕೋವಿಡ್ -19 ರ ಮೂಲವನ್ನು ತನಿಖೆ ಮಾಡುವಲ್ಲಿ ನಮ್ಮ ಗುಪ್ತಚರ ವೃತ್ತಿಪರರ ಸಂಪೂರ್ಣ, ಎಚ್ಚರಿಕೆಯ ಮತ್ತು ವಸ್ತುನಿಷ್ಠ ಕೆಲಸವನ್ನು ಬೆಂಬಲಿಸುವುದನ್ನು ಮುಂದುವರೆಸಿದೆ ಎಂದು ಇಂಧನ ಇಲಾಖೆ ವಕ್ತಾರರು ಉಲ್ಲೇಖಿಸಿದ್ದಾರೆ. ಆದಾಗ್ಯೂ ತನ್ನ ಮೌಲ್ಯಮಾಪನದ ವಿವರಗಳನ್ನು ಚರ್ಚಿಸಲು ಸಂಸ್ಥೆ ನಿರಾಕರಿಸಿದೆ ಎಂದು ವರದಿ ತಿಳಿಸಿದೆ.