ಶ್ರೀಹರಿಕೋಟಾ (ಆಂಧ್ರಪ್ರದೇಶ): ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಭಾರತದ ನ್ಯಾವಿಗೇಷನ್ ಉಪಗ್ರಹವನ್ನು ಉಡಾವಣೆ ಮಾಡಲು 27.5 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಭಾನುವಾರ ಬೆಳಗ್ಗೆ 7.12 ಗಂಟೆಯಿಂದ ಕೌಂಟ್‌ಡೌನ್ ಆರಂಭಿಸಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಸ್ರೊ ತನ್ನ ಎರಡನೇ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ ಸರಣಿಯ ಉಡಾವಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಇದು NavIC (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್) ಸೇವೆಗಳ ನಿರಂತರತೆಯನ್ನು ಖಾತರಿಪಡಿಸುವ ಮಹತ್ವದ ಉಡಾವಣೆಯಾಗಿದೆ.
ಭಾರತೀಯ ಪ್ರಾದೇಶಿಕ ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್ ಆಗಿರುವ ನಾವಿಕ್, ಜಿಪಿಎಸ್ ವ್ಯವಸ್ಥೆಯನ್ನು ಹೋಲುತ್ತದೆ. ಇದು ಭಾರತದಲ್ಲಿ ಮತ್ತು ಮುಖ್ಯ ಭೂಭಾಗದ ಸುತ್ತ 1,500 ಕಿಮೀ ವರೆಗೆ ವಿಸ್ತರಿಸಿರುವ ಪ್ರದೇಶದಲ್ಲಿ ನಿಖರವಾದ ಮತ್ತು ನೈಜ ಸಮಯದ ನ್ಯಾವಿಗೇಶನ್ ಅನ್ನು ಒದಗಿಸುತ್ತದೆ. ನಾವಿಕ್ ಸಂಕೇತಗಳನ್ನು ಬಳಕೆದಾರರ ಲೊಕೇಶನ್ ಅನ್ನು 20 ಮೀಟರ್‌ಗಳಿಗಿಂತ ನಿಖರವಾಗಿ ಮತ್ತು 50 ನ್ಯಾನೊಸೆಕೆಂಡ್‌ಗಳಿಗಿಂತ ಉತ್ತಮ ಸಮಯದ ನಿಖರತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
51.7 ಮೀಟರ್ ಎತ್ತರದ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 15ನೇ ಹಾರಾಟದಲ್ಲಿ ಸೋಮವಾರ ಬೆಳಗ್ಗೆ 10.42ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (ಶಾರ್) ಎರಡನೇ ಉಡಾವಣಾ ಕೇಂದ್ರದಿಂದ 2,232 ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹ NVS-01 ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಹಾರಾಟದ ಸುಮಾರು 20 ನಿಮಿಷಗಳ ನಂತರ ರಾಕೆಟ್ ಸುಮಾರು 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಯಲ್ಲಿ (ಜಿಟಿಒ) ಉಪಗ್ರಹವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ಹೇಳಿದೆ.