ಶ್ರೀಹರಿಕೋಟಾ:ಪಿಎಸ್ಎಲ್ವಿ, ಜಿಎಸ್ಎಲ್ವಿ ವಾಹಕದ ಮೂಲಕ ಭಾರಿ ಗಾತ್ರದ ಉಪಗ್ರಹಗಳನ್ನು ಕಕ್ಷೆ ಸೇರಿಸಿರುವ ಭಾರತದ ಹೆಮ್ಮೆಯ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೀಗ ಹೊಸ ಶಕೆಗೆ ನಾಂದಿ ಹಾಡಲಿದೆ. ಇದೇ ಮೊದಲ ಬಾರಿಗೆ ಸಣ್ಣ ಗಾತ್ರದ ಎಸ್ಎಸ್ಎಲ್ವಿ(ಸ್ಮಾಲ್ ಸ್ಯಾಟಲೈಟ್ ವೆಹಿಕಲ್ ಲಾಂಚ್) ವಾಹಕದ ಮೂಲಕ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಬೆಳಗ್ಗೆ 9.18 ಗಂಟೆಗೆ ರಾಕೆಟ್ ನಭಕ್ಕೆ ಜಿಗಿಯಲಿದೆ.
ಚೆನ್ನೈನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ಉಡಾವಣೆಯಾಗಲಿದ್ದು, ಭಾನುವಾರ ನಸುಕಿನ 2.26 ನಿಮಿಷದಿಂದ ರಾಕೆಟ್ ಉಡಾವಣೆಯ ಕಾರ್ಯ ಶುರುವಾಗಿದೆ. ಇದರಲ್ಲಿ 2 ಸಣ್ಣ ಗಾತ್ರದ ಉಪಗ್ರಹಗಳಿದ್ದು, ಒಂದನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ ಎಂದು ಇಸ್ರೋ ತಿಳಿಸಿದೆ.
ವಿಶೇಷತೆಯೇನು?:ಇದವರೆಗೂ ಇಸ್ರೋ ಬೃಹತ್ ಪ್ರಮಾಣದ ಸ್ವದೇಶಿ ನಿರ್ಮಿತ ಮತ್ತು ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿತ್ತು. ಇಂದು ಉಡಾಯಿಸಲಾಗುವ ಎಸ್ಎಸ್ಎಲ್ವಿ ಮೂಲಕ ಚಿಕ್ಕ ರಾಕೆಟ್ಗಳ ಜಗತ್ತಿಗೂ ತನ್ನನ್ನು ತೆರೆದುಕೊಳ್ಳಲಿದೆ. ಇವುಗಳ ಪರಿಭ್ರಮಣ ಅವಧಿ ಕಡಿಮೆ. ಭೂಮಿಯಿಂದ ಕಡಿಮೆ ಎತ್ತರದ ಕಕ್ಷೆಗಳಲ್ಲಿ ಇವು ಕಾರ್ಯಾಚರಣೆ ಮಾಡುತ್ತವೆ. ಇವುಗಳನ್ನು ನಭಕ್ಕೆ ಸೇರಿಸುವ ಮೂಲಕ ಬಾಹ್ಯಾಕಾಶ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ.