ಕರ್ನಾಟಕ

karnataka

ETV Bharat / science-and-technology

ಕಾಪಿರೈಟ್ ಉಲ್ಲಂಘನೆ; ಅಮೆರಿಕದಲ್ಲಿ ಆ್ಯಪಲ್​ನ​ ಸ್ಮಾರ್ಟ್​ವಾಚ್ ಮಾರಾಟಕ್ಕೆ ನಿರ್ಬಂಧ

ಅಮೆರಿಕದಲ್ಲಿ ಆ್ಯಪಲ್​ನ ಎರಡು ಮಾದರಿಯ ಸ್ಮಾರ್ಟ್​ವಾಚ್​​ಗಳ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

Apple loses bid to halt Watch sales ban in US
Apple loses bid to halt Watch sales ban in US

By ETV Bharat Karnataka Team

Published : Dec 21, 2023, 1:22 PM IST

ವಾಷಿಂಗ್ಟನ್​: ಅಮೆರಿಕದಲ್ಲಿ ತನ್ನ ಎರಡು ಮಾದರಿಯ ಆ್ಯಪಲ್ ವಾಚ್ ಮಾರಾಟವನ್ನು ನಿಷೇಧಿಸುವ ಆದೇಶ ಜಾರಿಯಾಗದಂತೆ ಮಾಡುವ ಆ್ಯಪಲ್​ನ ಪ್ರಯತ್ನಗಳು ವಿಫಲವಾಗಿವೆ. ಆದಾಗ್ಯೂ ಕೊನೆ ಕ್ಷಣದಲ್ಲಿ ಶ್ವೇತ ಭವನವೇನಾದರೂ ಮಧ್ಯಸ್ಥಿಕೆ ವಹಿಸಿದಲ್ಲಿ ಆ್ಯಪಲ್​ ವಾಚ್​ಗಳ ಮೇಲಿನ ನಿರ್ಬಂಧ ಹಿಂತೆಗೆಯಬಹುದು.

ಈ ವರ್ಷ ಬಿಡುಗಡೆಯಾದ ಎರಡು ಆ್ಯಪಲ್ ವಾಚ್ ಮಾದರಿಗಳಾದ ಆ್ಯಪಲ್ ವಾಚ್ ಸೀರಿಸ್ 9 ಮತ್ತು ಆಪಲ್ ವಾಚ್ ಅಲ್ಟ್ರಾ 2 ಅನ್ನು ಗುರುವಾರದಿಂದ ತನ್ನ ವೆಬ್​ಸೈಟ್​ನಲ್ಲಿ ಮತ್ತು ಭಾನುವಾರದ ನಂತರ ಆ್ಯಪಲ್ ಮಳಿಗೆಗಳಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸುವುದಾಗಿ ಆ್ಯಪಲ್ ಈ ವಾರದ ಆರಂಭದಲ್ಲಿ ತಿಳಿಸಿತ್ತು. ಆದರೆ, ಅದಕ್ಕೂ ಹಳೆಯ ಮಾದರಿಯ ವಾಚ್​ಗಳ ಮಾರಾಟವನ್ನು ಕಂಪನಿ ಮುಂದುವರಿಸಲಿದೆ.

ಆ್ಯಪಲ್​ ವಾಚ್​ನಲ್ಲಿರುವ ಬ್ಲಡ್ ಆಕ್ಸಿಜನ್ ಸೆನ್ಸರ್ ತಂತ್ರಜ್ಞಾನವು ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆ ತಯಾರಿಸುವ ಕಂಪನಿಯಾದ ಮಾಸಿಮೊದ ಕಾಪಿರೈಟ್​ ಉಲ್ಲಂಘನೆಯಾಗಿದೆ ಎಂದು ಇಂಟರ್ ನ್ಯಾಷನಲ್ ಟ್ರೇಡ್ ಕಮಿಷನ್ (ಐಟಿಸಿ) ಆದೇಶಿಸಿದೆ. ಹೀಗಾಗಿ ಅಮೆರಿಕದಲ್ಲಿ ಈ ತಂತ್ರಜ್ಞಾನ ಹೊಂದಿರುವ ಆ್ಯಪಲ್​ ವಾಚ್​ಗಳ ಮಾರಾಟವನ್ನು ನಿರ್ಬಂಧಿಸಲಾಗುತ್ತಿದೆ.

ಆದೇಶ ಜಾರಿಯಾದಲ್ಲಿ ಮಾರಾಟ ಮಾಡದಂತಹ ಸನ್ನಿವೇಶ:ಈ ಆದೇಶ ಜಾರಿಯಾದಲ್ಲಿ ವರ್ಷಾಂತ್ಯದ ಮಾರಾಟ ಸಮಯದಲ್ಲಿಯೇ ಆ್ಯಪಲ್ ತನ್ನ ಅತ್ಯಂತ ಜನಪ್ರಿಯ ಸಾಧನಗಳನ್ನು ಮಾರಾಟ ಮಾಡಲಾಗದಂಥ ಸನ್ನಿವೇಶ ಎದುರಿಸಲಿದೆ. ಆದರೆ, ಇದಕ್ಕೂ ಮುನ್ನ ಆಮದು ಮಾಡಿಕೊಳ್ಳಲಾದ ಈ ವಾಚ್​ಗಳು ಚಿಲ್ಲರೆ ಮಾರಾಟಗಾರರ ಬಳಿ ಇದ್ದರೆ ಅವನ್ನು ಮಾತ್ರ ಮಾರಾಟ ಮಾಡಬಹುದು.

ಕಂಪನಿಯು ನಿರ್ದಿಷ್ಟ ವಾಚ್​ಗಳ ಮಾರಾಟವನ್ನು ಸ್ಥಗಿತಗೊಳಿಸುವ ಯೋಜನೆಯನ್ನು ಸೋಮವಾರ ಘೋಷಿಸಿದಾಗಿನಿಂದ ಆ್ಯಪಲ್ ಷೇರು ಶೇ 1ರಷ್ಟು ಮೌಲ್ಯ ಕಳೆದುಕೊಂಡಿವೆ. ವಾಚ್​ ಮಾರಾಟ ನಿಷೇಧ ಆದೇಶವನ್ನು ಅಧ್ಯಕ್ಷ ಜೋ ಬೈಡನ್ ತಡೆಹಿಡಿಯಬಹುದು. ಆದರೆ, ಅಂಥ ಯಾವ ಸಂಕೇತವನ್ನು ಅವರು ಈವರೆಗೆ ನೀಡಿಲ್ಲ.

’ಗಡುವು ಪರಿಶೀಲಿಸುತ್ತಿದ್ದೇವೆ’- ಶ್ವೇತಭವನ:"ನಾವು ಈ ಪ್ರಕರಣ ಮತ್ತು ಡಿಸೆಂಬರ್ 25 ರ ಅದರ ಗಡುವನ್ನು ಪರಿಶೀಲನೆ ಮಾಡುತ್ತಿದ್ದೇವೆ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್ ಪಿಯರೆ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಆ್ಯಪಲ್ ಕಂಪನಿಯು ತನ್ನ ಕಾಪಿರೈಟ್​ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ, ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಪಾಲುದಾರಿಕೆ ಏರ್ಪಡಿಸುವ ಬಗ್ಗೆ ಕಂಪನಿಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ ಸಿಬ್ಬಂದಿಯ ದಾರಿ ತಪ್ಪಿಸಿದೆ ಎಂದು ಮಾಸಿಮೊ ಸಿಇಒ ಜೋ ಕಿಯಾನಿ ಆರೋಪಿಸಿದ್ದಾರೆ.

ಇದನ್ನೂ ಓದಿ : ಚಂದ್ರಯಾನ-3 ಯಶಸ್ವಿ, ಸೂರ್ಯನತ್ತ ಪಯಣ; 2023ರಲ್ಲಿ ಇಸ್ರೋ ಅಪ್ರತಿಮ ಸಾಧನೆ

ABOUT THE AUTHOR

...view details