ದುಬೈ:2030ರ ವೇಳೆಗೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಏಷ್ಯಾದ ಬಲಿಷ್ಠ ರಾಷ್ಟ್ರಗಳಾದ ಭಾರತ ಮತ್ತು ಚೀನಾ ದೂರ ಉಳಿದಿವೆ. ಇದೇ ವೇಳೆ ಒಪ್ಪಂದಕ್ಕೆ ಹಲವು ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ. ದುಬೈನಲ್ಲಿ ವಿಶ್ವ ಹವಾಮಾನ ಶೃಂಗಸಭೆ ನಡೆಯುತ್ತಿದೆ.
ಜಪಾನ್, ಆಸ್ಟ್ರೇಲಿಯಾ, ಕೆನಡಾ, ಚಿಲಿ, ಬ್ರೆಜಿಲ್, ನೈಜೀರಿಯಾ, ಬಾರ್ಬಡೋಸ್ ಸೇರಿದಂತೆ 118 ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಆದರೆ ಭಾರತ ಮತ್ತು ಚೀನಾ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ದೆಹಲಿಯಲ್ಲಿ ಈಚೆಗೆ ನಡೆದಿದ್ದ ಜಿ-20 ಶೃಂಗದಲ್ಲಿ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ಬದ್ಧತೆಯನ್ನು ಭಾರತ ತೋರಿತ್ತು. ಚೀನಾ ಕೂಡ ಈ ಬಗ್ಗೆ ಅನುಮೋದನೆ ನೀಡಿದೆ. ಆದರೆ, ಕಾಪ್ ಶೃಂಗದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಿಲ್ಲ.
ನವೀಕರಿಸಬಹುದಾದ ಇಂಧನ ಎಂದರೇನು?:ಸದ್ಯ ಜಗತ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಒಡಲಲ್ಲಿನ ಪಳೆಯುಳಿಕೆಗಳಿಂದ ಸಿಗುವ ಇಂಧನವೇ ಮೂಲವಾಗಿದೆ. ಇದು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಕಾರಣ, ಇದರ ಬಳಕೆ ತಗ್ಗಿಸುವ ಮತ್ತು ಗಾಳಿ, ನೀರು, ಜೈವಿಕ ವಸ್ತುಗಳಿಂದಲೇ ಇಂಧನವನ್ನು ಉತ್ಪತ್ತಿ ಮಾಡಿ ಅದನ್ನೇ ಬಳಸುವ ಪ್ರಕ್ರಿಯೆಯೇ ನವೀಕರಿಸಬಹುದಾದ ಇಂಧನವಾಗಿದೆ. ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರಗಳಿಗೆ ವಿದಾಯ ಹೇಳುವುದಕ್ಕೆ ಇದು ಅನುಮೋದಿಸುತ್ತದೆ.