ನವದೆಹಲಿ :ಒಂದು ಟೆಲಿಕಾಂ ಕಂಪನಿಯ ಸಿಮ್ ಹೊಂದಿರುವವರು ಇನ್ನೊಂದು ಟೆಲಿಕಾಂ ಕಂಪನಿಯ ಸೇವೆಗೆ ವರ್ಗಾವಣೆಯಾಗಲು ಬಯಸಿದರೆ ಅವರು ತಮ್ಮ ಸಿಮ್ ಅನ್ನು ಪೋರ್ಟ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಪೋರ್ಟಿಂಗ್ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ತೀರಾ ಗೋಜಲಾಗುತ್ತಿರುವುದರಿಂದ ಬಳಕೆದಾರರು ಹೈರಾಣಾಗುತ್ತಿದ್ದಾರೆ. ಕಳೆದ 24 ತಿಂಗಳ ಅವಧಿಯಲ್ಲಿ ಸಿಮ್ ಪೋರ್ಟ್ ಮಾಡಿಕೊಂಡ ಪ್ರತಿ ನಾಲ್ವರ ಪೈಕಿ ಒಬ್ಬರು ಪೋರ್ಟ್ ಮಾಡಿಕೊಳ್ಳಲು ತೀರಾ ಕಷ್ಟಪಟ್ಟಿದ್ದಾರೆ ಎಂದು ಶುಕ್ರವಾರ ಬಂದ ಹೊಸ ವರದಿಯೊಂದು ಹೇಳಿದೆ. ಕೇವಲ ಶೇ 47 ರಷ್ಟು ಗ್ರಾಹಕರು ಮಾತ್ರ ತಮ್ಮ ಪೋರ್ಟಿಂಗ್ ಸುಲಭವಾಗಿ ಆಯಿತು ಎಂದು ಹೇಳಿಕೊಂಡಿದ್ದಾರೆ.
ಆನ್ಲೈನ್ ಕಮ್ಯುನಿಟಿ ಪ್ಲಾಟ್ಫಾರ್ಮ್ ಲೋಕಲ್ ಸರ್ಕಲ್ಸ್ ಪ್ರಕಾರ, ಶೇಕಡಾ 11 ರಷ್ಟು ಗ್ರಾಹಕರು ಪೋರ್ಟಿಂಗ್ ಪ್ರಕ್ರಿಯೆಯು ಕಷ್ಟಕರವಾಗಿತ್ತು ಎಂದು ಹೇಳಿದರು ಮತ್ತು ಶೇಕಡಾ 14 ರಷ್ಟು ಜನ ಇದು ತೀರಾ ಕಷ್ಟವಾಗಿತ್ತು ಎಂದು ಹೇಳಿದರು. ಇನ್ನು ಸುಮಾರು ಶೇಕಡಾ 23 ರಷ್ಟು ಜನ ಈ ಪ್ರಕ್ರಿಯೆ ತೀರಾ ಕಷ್ಟವಲ್ಲವಾದರೂ ಸುಲಭವಂತೂ ಅಲ್ಲ ಎಂದಿದ್ದಾರೆ. ಇನ್ನು ಶೇಕಡಾ 29 ರಷ್ಟು ಜನ ಇದು ತುಂಬಾ ಸುಲಭ ಎಂದು ಹೇಳಿದರೆ, ಶೇಕಡಾ 18 ರಷ್ಟು ಜನ ಇದು ಸುಲಭವಾಗಿತ್ತು ಎಂದಿದ್ದಾರೆ.
ಭಾರತದ 311 ಜಿಲ್ಲೆಗಳಲ್ಲಿ ವಾಸಿಸುವ ನಾಗರಿಕರಿಂದ ಬಂದ 23,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಸುಮಾರು ಶೇಕಡಾ 44 ರಷ್ಟು ಜನ ಮೊದಲ ಶ್ರೇಣಿಯ ನಗರಗಳಿಗೆ, ಶೇಕಡಾ 32 ರಷ್ಟು ಜನ ಎರಡನೇ ಶ್ರೇಣಿಯ ನಗರಗಳಿಗೆ, ಶೇಕಡಾ 24 ರಷ್ಟು ಜನ 3, 4 ನೇ ಶ್ರೇಣಿಯ ನಗರಗಳು ಮತ್ತು ಗ್ರಾಮೀಣ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಬೇರೆ ಆಪರೇಟರ್ಗೆ ಪೋರ್ಟ್ ಮಾಡುವಾಗ ಮೂಲ ಕಂಪನಿಯವರು ಅದಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಬಹುತೇಕರು ಹೇಳಿರುವುದು ಗಮನಾರ್ಹ.