ಹಾಂಕಾಂಗ್ (ಚೀನಾ):2018 ಮತ್ತು 2019ರಲ್ಲಿ ವಿಶ್ವದ ಮೊದಲ ಜೀನ್ ಎಡಿಟಿಂಗ್ ತಂತ್ರಜ್ಞಾನದಿಂದ ಶಿಶುಗಳನ್ನು ಸೃಷ್ಟಿಸಿ ಮೂರು ವರ್ಷಗಳವರೆಗೆ ಜೈಲುವಾಸ ಅನುಭವಿಸಿದ್ದ ಚೀನಾದ ವಿವಾದಿತ ಚೀನಾದ ವಿಜ್ಞಾನಿ ಹೇ ಜಿಯಾನ್‌ಕುಯಿ ಅವರು, ''ಜೀನ್ ಎಡಿಟಿಂಗ್‌ನಿಂದ ಜನಿಸಿದ ಮಕ್ಕಳು ಪೋಷಕರೊಂದಿಗೆ ಸಂತೋಷದಿಂದ ಬದುಕುತ್ತಿದ್ದಾರೆ'' ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ''ಆ ಮಕ್ಕಳು ಶಾಂತಿಯುತವಾಗಿ, ಯಾವುದೇ ಅಡೆತಡೆಯಿಲ್ಲದ ಜೀವನ ನಡೆಸುತ್ತಿದ್ದಾರೆ. ಅವರಿಗೆ ಅಗತ್ಯವಿದ್ದರೆ ಆಗಾಗ ವೈದ್ಯಕೀಯ ತಪಾಸಣೆ ಮಾಡಬೇಕಾಗುತ್ತದೆ'' ಎಂದು ತಿಳಿಸಿದ್ದಾರೆ.
ಮಕ್ಕಳ ಭವಿಷ್ಯದ ಬಗ್ಗೆ ನೀವು ಚಿಂತಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜ್ಞಾನಿ, "ನೀವು ಅವರ ಬಗ್ಗೆ ಹೆಚ್ಚಿನ ಭರವಸೆ ಹೊಂದಿರುತ್ತೀರಿ. ಜೊತೆಗೆ ನೀವು ತುಂಬಾ ಆತಂಕವನ್ನೂ ಹೊಂದಿರುತ್ತೀರಿ" ಎಂದು ತಿಳಿಸಿದರು. ಡಿಸೆಂಬರ್ 2019ರಲ್ಲಿ, 'CRISPR-Cas9' ಎಂಬ ಜೀನ್-ಎಡಿಟಿಂಗ್ ಉಪಕರಣವನ್ನು ಬಳಸಿಕೊಂಡು ವೈದ್ಯಕೀಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾದ ನ್ಯಾಯಾಲಯವು ಹೇ ಜಿಯಾನ್‌ಕುಯಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಜೀನ್ ಎಡಿಟಿಂಗ್ ಟೂಲ್:2018ರಲ್ಲಿ ಹೇ ಜಿಯಾನ್‌ಕುಯಿ ಅವರು ಲುಲು ಮತ್ತು ನಾನಾ ಹೆಸರಿನ ಎರಡು ಜೀನ್ಗಳನ್ನು ಮಾರ್ಪಡಿಸಿದ ಅವಳಿ ಹೆಣ್ಣು ಮಕ್ಕಳನ್ನು ಸೃಷ್ಟಿಸಿದ್ದಾರೆ ಎಂದು ಘೋಷಿಸಿ, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದರು. 2019ರಲ್ಲಿ ಮೂರನೇ ಮಗು ಆಮಿಯನ್ನು ಸೃಷ್ಟಿಸಿ ಸಂಚಲನ ಉಂಟು ಮಾಡಿದ್ದರು. CCR5 ಜೀನ್ ಅನ್ನು ಪುನಃ ಬರೆಯಲು ಅವರು ಜೀನ್ ಎಡಿಟಿಂಗ್ ಟೂಲ್ 'CRISPR Cas9' ಬಳಸಿದ್ದರು. ಇದು ಎಚ್ಐವಿಗೆ ಪ್ರತಿರೋಧವನ್ನು ಒಡ್ಡಲು ಸೃಷ್ಟಿಸಿರುವ ಆನುವಂಶಿಕ ರೂಪಾಂತರ ಮಾಡುವ ತಂತ್ರಜ್ಞಾನವಾಗಿದೆ.