ಮಾನವನಿಗೆ ಎಲ್ಲವೂ ಕೌತುಕಮಯ. ಒಮ್ಮೊಮ್ಮೆ ತಾನಿರುವ ಪರಿಸರದಲ್ಲೇ ಅನೇಕ ಅಚ್ಚರಿಗಳನ್ನು ಕಂಡು ಬೆರಗಾಗುವ ಆತನಿಗೆ ಭೂಮಿಯ ಒಳಗೇನಿದೆ ಎಂಬ ಕುತೂಹಲ ಅನಾದಿಕಾಲದಿಂದಲೂ ಕಾಡುತ್ತಾ ಬಂದಿದೆ. ಆ ಕುತೂಹಲಕ್ಕೆ ಉತ್ತರ ಕಂಡು ಹಿಡಿಯಲು ಅನೇಕ ಪ್ರಯತ್ನಗಳನ್ನು ನಡೆಸಿಯೂ, ಕೆಲವೊಂದು 'ಅಂದಾಜುಗಳಲ್ಲೇ' ಸದ್ಯಕ್ಕೆ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದಾನೆ.
ಹೌದು, ಈಗ ಒಂದು ಹೊಸ ಸಂಶೋಧನೆ ನಡೆದಿದೆ. ಈ ಸಂಶೋಧನೆ ಭೂಮಿಯ ಆಳಕ್ಕೆ ಸಂಬಂಧಿಸಿದ್ದು. ಭೂಮಿಯು ಸೃಷ್ಟಿಯಾಗುವ ವೇಳೆಯಲ್ಲಿ ಅಂದರೆ ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಇದ್ದ ಕೆಲವೊಂದು ರಾಸಾಯನಿಕ ವಸ್ತುಗಳು ಈಗಲೂ ಭೂಮಿಯ ಆಳದಲ್ಲಿರುವ ಸಾಧ್ಯತೆಯ ಬಗ್ಗೆ ಸಂಶೋಧನೆ ಬೆಳಕು ಚೆಲ್ಲುತ್ತದೆ.
ಈ ಸಂಶೋಧನಾ ವರದಿ ನೇಚರ್ ಜಿಯೋಸೈನ್ಸ್ (Nature Geoscience) ಎಂಬ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅಮೆರಿಕದ ಉತಾಹ್ ವಿಶ್ವವಿದ್ಯಾಲಯ ಇಂಥದ್ದೊಂದು ಮಹತ್ವದ ಸಂಶೋಧನೆ ಕೈಗೆತ್ತಿಕೊಂಡಿತ್ತು.
ಉತಾಹ್ ವಿಶ್ವವಿದ್ಯಾಲಯದ ಸಂಶೋಧಕರು ಭೂಮಿಯ ಒಳಗಿನ ಸಂರಚನೆಯನ್ನು ಅರಿಯಲು ರೆಡಾರ್ಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಹಾಗೆಯೇ ಭೂಕಂಪನದ ಅಲೆಗಳನ್ನು ದಿಕ್ಕುಗಳನ್ನು ತಿಳಿಯಲು ಸಂಶೋಧನೆಯಲ್ಲಿ ಬಳಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸಂಶೋಧನೆಗೆ ಕಾರಣವಾದ ಅಲೆಗಳ ವೇಗ:
ಅತ್ಯಂತ ಪ್ರಮುಖವಾಗಿ ಭೂಮಿಯನ್ನು ಮೇಲ್ಪದರ (Crust), ಮ್ಯಾಂಟಲ್ (Mantle) ಔಟರ್ ಕೋರ್ (Outer Core) ಮತ್ತು ಇನ್ನರ್ ಕೋರ್ (Inner Core) ಎಂದು ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡುತ್ತೇವೆ.
ಈ ಇನ್ನರ್ ಕೋರ್ನ ಮೂಲಕ ಹಾದು ಬರುವ ಭೂಕಂಪನ ಅಲೆಗಳು ತುಂಬಾ ನಿಧಾನವಾಗಿ ಚಲಿಸುತ್ತವೆ ಎಂಬುದನ್ನು ಮೊದಲಿಗೆ ವಿಜ್ಞಾನಿಗಳು ಕಂಡುಕೊಂಡರು. ಇದರ ಜೊತೆಗೆ, ಅಲೆಗಳು ಹಾದುಹೋಗುವ ಇನ್ನರ್ ಕೋರ್ನ ಭಾಗಗಳು ಪದರುಗಳಿಂದ ಕೂಡಿವೆ ಎಂಬುದು ತಿಳಿದುಬಂದಿದೆ.