ಕರ್ನಾಟಕ

karnataka

ETV Bharat / science-and-technology

ChatGPT ರಾಜಕೀಯ ಪಕ್ಷಪಾತಿ, ಎಡಪಂಥೀಯ ಪರ; ಸಂಶೋಧನೆಯಲ್ಲಿ ಹೊರಬಂದ ಸತ್ಯ! - etv bharat kannada

ChatGPT Politically biased says research: ಓಪನ್ ಎಐ ನಿರ್ಮಿತ ಚಾಟ್​ ಜಿಪಿಟಿ ರಾಜಕೀಯವಾಗಿ ಪಕ್ಷಪಾತ ಧೋರಣೆಯನ್ನು ಹೊಂದಿದೆ ಎಂದು ಹೊಸ ಸಂಶೋಧನಾ ವರದಿಗಳು ಹೇಳಿವೆ.

ChatGPT is politically biased, finds study
ChatGPT is politically biased, finds study

By

Published : Aug 20, 2023, 12:20 PM IST

ಲಂಡನ್ :ಓಪನ್ ಎಐನ ಕೃತಕ ಬುದ್ಧಿಮತ್ತೆ(AI) ಚಾಟ್ ಬಾಟ್ ಚಾಟ್ ಜಿಪಿಟಿ (chatbot ChatGPT) ಗಮನಾರ್ಹ ಮತ್ತು ವ್ಯವಸ್ಥಿತ ಎಡಪಂಥೀಯ ಪಕ್ಷಪಾತ (Left-wing bias) ಧೋರಣೆಯನ್ನು ಹೊಂದಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಚಾಟ್​​ ಜಿಪಿಟಿಯ ಪ್ರತಿಕ್ರಿಯೆಗಳು ಅಮೆರಿಕದಲ್ಲಿ ಡೆಮೋಕ್ರಾಟ್ಸ್​, ಯುಕೆಯಲ್ಲಿ ಲೇಬರ್ ಪಕ್ಷ ಮತ್ತು ಬ್ರೆಜಿಲ್​ನಲ್ಲಿ ಅಲ್ಲಿನ ವರ್ಕರ್ಸ್ ಪಾರ್ಟಿಯ ಅಧ್ಯಕ್ಷ ಲುಲಾ ಡಾ ಸಿಲ್ವಾ ಅವರ ಪರವಾಗಿವೆ ಎಂದು 'ಪಬ್ಲಿಕ್ ಚಾಯ್ಸ್' ಜರ್ನಲ್​ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.

ಚಾಟ್​​ ಜಿಪಿಟಿಯಲ್ಲಿ ಆಂತರಿಕವಾಗಿ ರಾಜಕೀಯ ಪಕ್ಷಪಾತವನ್ನು ಅಳವಡಿಸಲಾಗಿದೆ ಎಂಬ ಬಗ್ಗೆ ಈ ಹಿಂದೆಯೇ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದೇ ಮೊದಲ ಬಾರಿಗೆ ಪುರಾವೆ ಆಧರಿತ ಸಂಶೋಧನೆಗಳ ಮೂಲಕ ಇದನ್ನು ಸಾಬೀತುಪಡಿಸಲು ಯತ್ನಿಸಲಾಗಿದೆ. "ಸತ್ಯ ಮಾಹಿತಿಗಳನ್ನು ನೋಡಲು ಮತ್ತು ಹೊಸ ಕಂಟೆಂಟ್​​ಗಳನ್ನು ರಚಿಸಲು ಎಐ-ಚಾಲಿತ ಚಾಟ್​ ಬಾಟ್​​ಗಳ ಬಳಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹೀಗಾಗಿ ಚಾಟ್​​ ಜಿಪಿಟಿಯಂಥ ಜನಪ್ರಿಯ ಪ್ಲಾಟ್​ಫಾರ್ಮ್​ಗಳ ಪ್ರತಿಕ್ರಿಯೆಗಳು ಸಾಧ್ಯವಾದಷ್ಟು ನಿಷ್ಪಕ್ಷಪಾತವಾಗಿರುವುದು ಬಹಳ ಮುಖ್ಯ" ಎಂದು ಯುಕೆಯ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ನಾರ್ವಿಚ್ ಬಿಸಿನೆಸ್ ಸ್ಕೂಲ್​ನ ಪ್ರಮುಖ ಸಂಶೋಧಕ ಫ್ಯಾಬಿಯೊ ಮೊಟೊಕಿ ಹೇಳಿದರು.

"ರಾಜಕೀಯ ಪಕ್ಷಪಾತದಿಂದ ಬಳಕೆದಾರರ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರಬಹುದು. ಅಲ್ಲದೆ ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಗಳ ಮೇಲೂ ಇದರ ಪರಿಣಾಮವಾಗುವ ಸಾಧ್ಯತೆಗಳಿರುತ್ತವೆ. ಇಂಟರ್​ನೆಟ್​ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಇರುವ ಪಕ್ಷಪಾತದ ಸಮಸ್ಯೆಗಳನ್ನು ಎಐ ಸಾಧನಗಳು ಪುನರಾವರ್ತಿಸಬಹುದು ಅಥವಾ ಅವನ್ನು ಹೆಚ್ಚಿಸಬಹುದು ಎಂದು ನಮ್ಮ ಸಂಶೋಧನೆಗಳು ತೋರಿಸಿವೆ" ಎಂದು ಮೋಟೋಕಿ ಹೇಳಿದರು.

ಚಾಟ್ ಜಿಪಿಟಿಯ ರಾಜಕೀಯ ನಿಷ್ಪಕ್ಷಪಾತ ಧೋರಣೆಯನ್ನು ಪರೀಕ್ಷಿಸಲು ಸಂಶೋಧಕರು ಹೊಸ ವಿಧಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಚಾಟ್​​ ಜಿಪಿಟಿಯ ರಾಜಕೀಯ ಧೋರಣೆಯನ್ನು ಪರೀಕ್ಷಿಸಲು ಅದಕ್ಕೆ 60 ಕ್ಕೂ ಹೆಚ್ಚು ಸೈದ್ಧಾಂತಿಕ ಪ್ರಶ್ನೆಗಳನ್ನು ಕೇಳಲಾಯಿತು ಮತ್ತು ಅವುಗಳಿಗೆ ವಿಭಿನ್ನ ರಾಜಕೀಯ ಪಕ್ಷಗಳ ವ್ಯಕ್ತಿಗಳು ಹೇಗೆ ಉತ್ತರಿಸಬಹುದೋ ಹಾಗೆ ಉತ್ತರಿಸುವಂತೆ ಕೇಳಲಾಯಿತು. ಇದಕ್ಕೆ ಚಾಟ್​​ ಜಿಪಿಟಿ ನೀಡಿದ ಪ್ರತಿಕ್ರಿಯೆಗಳನ್ನು ಹಾಗೂ ಅದೇ ಪ್ರಶ್ನೆಗಳಿಗೆ ಅದು ನೀಡಿದ ಡೀಫಾಲ್ಟ್ ಉತ್ತರಗಳೊಂದಿಗೆ ಹೋಲಿಸಲಾಯಿತು. ಇದರ ಮೂಲಕ ಚಾಟ್​​ ಜಿಪಿಟಿಯು ಎಷ್ಟರ ಮಟ್ಟಿಗೆ ನಿರ್ದಿಷ್ಟ ರಾಜಕೀಯ ನಿಲುವಿನ ಧೋರಣೆಯನ್ನು ಪ್ರದರ್ಶಿಸುತ್ತದೆ ಎಂಬುದನ್ನು ಅಳೆಯಲಾಯಿತು.

ಚಾಟ್ ಜಿಪಿಟಿಯಂತಹ ಎಐ ಪ್ಲಾಟ್ ಫಾರ್ಮ್​ಗಳಿಗೆ ಯೋಚನಾ ಶಕ್ತಿ ನೀಡುವ 'ದೊಡ್ಡ ಭಾಷಾ ಮಾದರಿಗಳ' (large language models) ಅಂತರ್ಗತ ಯಾದೃಚ್ಛಿಕತೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು, ಪ್ರತಿ ಪ್ರಶ್ನೆಯನ್ನು 100 ಬಾರಿ ಕೇಳಲಾಯಿತು ಮತ್ತು ವಿಭಿನ್ನ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಯಿತು. ಈ ಬಹು ಪ್ರತಿಕ್ರಿಯೆಗಳನ್ನು ನಂತರ 1000-ಪುನರಾವರ್ತಿತ 'ಬೂಟ್ ಸ್ಟ್ರ್ಯಾಪ್' (ಮೂಲ ಡೇಟಾವನ್ನು ಮರು-ಮಾದರಿ ಮಾಡುವ ವಿಧಾನ) ಮೂಲಕ ರಚಿಸಲಾಯಿತು. ಹೀಗೆ ಸಂಶೋಧನೆಗಳ ಫಲಿತಾಂಶವನ್ನು ಆದಷ್ಟೂ ವಿಶ್ವಾಸಾರ್ಹ ಮತ್ತು ನಿಖರವಾಗಿಸಲಾಯಿತು. ಈ ಎಲ್ಲ ಸಂಶೋಧನಾ ವರದಿಗಳ ಪ್ರಕಾರ ಚಾಟ್​​ ಜಿಪಿಟಿ ಹಲವಾರು ಸಂದರ್ಭಗಳಲ್ಲಿ ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಕಡೆಗೆ ವಾಲಿರುವ ಪ್ರತಿಕ್ರಿಯೆಗಳನ್ನು ನೀಡಿದ್ದು ಸ್ಪಷ್ಟವಾಗಿದೆ.

ಇದನ್ನೂ ಓದಿ : Social Media: ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ 3 ಗಂಟೆ ವ್ಯಯಿಸುತ್ತಾರಂತೆ ಭಾರತೀಯರು!

ABOUT THE AUTHOR

...view details