ಸ್ಯಾನ್ ಫ್ರಾನ್ಸಿಸ್ಕೋ: ಈ ಹಿಂದೆ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮೆರಿಕದ ಕಾನೂನು ವಿದ್ವಾಂಸರ ಪಟ್ಟಿಯಲ್ಲಿ, ಅಂಥ ಯಾವುದೇ ಕೃತ್ಯ ಎಸಗದ ಅಮಾಯಕ ಹಾಗೂ ಗೌರವಾನ್ವಿತ ಸ್ಥಾನ ಪಡೆದ ಕಾನೂನು ಪ್ರಾಧ್ಯಾಪಕರೊಬ್ಬರ ಹೆಸರನ್ನು AI ಚಾಟ್‌ಬಾಟ್ ಚಾಟ್‌ಜಿಪಿಟಿ ಸೇರಿಸಿದ ವಿಲಕ್ಷಣ ಘಟನೆ ಜರುಗಿದೆ. ಸಂಶೋಧನಾ ಅಧ್ಯಯನವೊಂದರ ಭಾಗವಾಗಿ ನಡೆದ ಪ್ರಕ್ರಿಯೆಯಲ್ಲಿ ಇಂಥದೊಂದು ಘಟನೆ ಜರುಗಿರುವುದು ಕಂಡು ಬಂದಿದೆ. ಆ ಪ್ರಾಧ್ಯಾಪಕರ ಹೆಸರನ್ನು ಚಾಟ್‌ಜಿಪಿಟಿ ಪಟ್ಟಿಯಲ್ಲಿ ತಪ್ಪಾಗಿ ಸೇರಿಸಿದೆ ಎನ್ನಲಾಗಿದೆ. ಜಾರ್ಜ್ ವಾಷಿಂಗ್ಟನ್ ಯುನಿವರ್ಸಿಟಿಯ ಪಬ್ಲಿಕ್ ಇಂಟೆರೆಸ್ಟ್ ಲಾ ವಿಭಾಗದ ಮುಖ್ಯಸ್ಥರಾಗಿರುವ ಜೋನಾಥನ್ ಟರ್ಲಿ, ಲೈಂಗಿಕ ದೌರ್ಜನ್ಯ ಎಸಗಿರುವವರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಆಗಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.
ನಾನು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಚಾಟ್‌ಜಿಪಿಟಿ ಇತ್ತೀಚೆಗೆ ಸುಳ್ಳು ಕಥೆಯನ್ನು ಬಿಡುಗಡೆ ಮಾಡಿದೆ ಎಂದು ಟರ್ಲಿ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದ ದಿನಪತ್ರಿಕೆಯೊಂದರಲ್ಲಿ ತಮ್ಮ ಅಭಿಪ್ರಾಯ ಬರೆದಿರುವ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಚಾಟ್ಜಿಪಿಟಿಯ ಬಗ್ಗೆ ತಾವು ನಡೆಸಿರುವ ಸಂಶೋಧನೆಯ ಬಗ್ಗೆ ಮಿತ್ರರಾಗಿರುವ ಕಾನೂನು ಪ್ರಾಧ್ಯಾಪಕರೊಬ್ಬರು ನನಗೆ ಇಮೇಲ್ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಅಲಾಸ್ಕಾಗೆ ಟ್ರಿಪ್ಗೆ ತೆರಳಿದ ಸಮಯದಲ್ಲಿ ಕಾನೂನು ವಿದ್ಯಾರ್ಥಿನಿಯರನ್ನು ನಾನು ಅಪ್ಪಿಕೊಂಡಿರುವ ಬಗ್ಗೆ 2018ರಲ್ಲಿ ವಾಷಿಂಗ್ಟನ್ ಪೋಸ್ಟ್ನಲ್ಲಿ ವರದಿ ಪ್ರಕಟವಾಗಿದೆ ಎಂದು ಚಾಟ್‌ಜಿಪಿಟಿ ಹೇಳಿದೆ.
ಆದರೆ, ವಾಸ್ತವ ಏನೆಂದರೆ ನಾನು ಯಾವತ್ತೂ ಅಂಥದೊಂದು ಟ್ರಿಪ್ಗೆ ಹೋಗಿಲ್ಲ ಮತ್ತು ಅಂಥ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ ಎಂದು ಟರ್ಲಿ ಹೇಳಿದ್ದಾರೆ. ಇಂಥದೊಂದು ಸುಳ್ಳು ಆರೋಪವನ್ನು ಚಾಟ್‌ಜಿಪಿಟಿ ಮಾಡಿದ್ದು ಮಾತ್ರವಲ್ಲದೇ, ಇಂಥ ಆರೋಪ ಮಾಡಲು ಅದು ಎಂದೂ ಪ್ರಕಟವೇ ಆಗಿರದ ಪತ್ರಿಕಾ ಸುದ್ದಿಯೊಂದನ್ನು ಉಲ್ಲೇಖಿಸಿದ್ದು ಮತ್ತೂ ಆಘಾತಕಾರಿ ಎಂದು ಟರ್ಲಿ ತಿಳಿಸಿದ್ದಾರೆ.