ನವದೆಹಲಿ: ಓಪನ್ ಎಐನ ಕೃತಕ ಬುದ್ಧಿಮತ್ತೆ ಅಪ್ಲಿಕೇಶನ್ ಚಾಟ್ ಜಿಪಿಟಿಯ ಆದಾಯ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಅಂದರೆ ಇದು ಹಣ ಪಾವತಿಸಿ ಚಾಟ್ ಬಾಟ್ ಅನ್ನು ಬಳಸಲು ಬಯಸುವವರ ಸಂಖ್ಯೆ ಮುಗಿಯುತ್ತಿದೆ ಎಂಬುದರ ಸೂಚನೆಯಾಗಿದೆ. ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಆ್ಯಪ್ ಫಿಗರ್ಸ್ ಅಂಕಿಅಂಶಗಳ ಪ್ರಕಾರ, ಚಾಟ್ ಜಿಪಿಟಿ ಕಳೆದ ಎರಡು ತಿಂಗಳುಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಆದಾಯದ ಬೆಳವಣಿಗೆಯನ್ನು ಕಾಣುತ್ತಿತ್ತು. ಆದರೆ ಈಗ ಆದಾಯ ಬೆಳವಣಿಗೆ ದರವು ಕೇವಲ 20 ಪ್ರತಿಶತದಷ್ಟಿದೆ (ಸೆಪ್ಟೆಂಬರ್ ವೇಳೆಗೆ).
ಚಾಟ್ ಜಿಪಿಟಿಯ ಆದಾಯ ಈಗಲೂ ಶೇಕಡಾ 20 ರಷ್ಟು ಬೆಳವಣಿಗೆಯಾಗುತ್ತಿರುವುದು ಅಚ್ಚರಿಯಾಗಿದೆ. ಆದರೆ ಹಿಂದಿನ ತಿಂಗಳುಗಳಲ್ಲಿ ಇದು ಶೇ 30ರಷ್ಟಿತ್ತು ಎಂಬುದು ಗಮನಾರ್ಹ ಎಂದು ವರದಿ ಹೇಳಿದೆ. ಹೊಸ ಆವೃತ್ತಿಯ ಚಾಟ್ ಜಿಪಿಟಿ + ಚಂದಾದಾರಿಕೆ ಸೇವೆಯನ್ನು ಪಡೆಯಲು ತಿಂಗಳಿಗೆ $ 19.99 ಡಾಲರ್ ಪಾವತಿಸಬೇಕಿದೆ. ಇದು ವೇಗದ ಪ್ರತಿಕ್ರಿಯೆ ಸಮಯ, ಹೊಸ ವೈಶಿಷ್ಟ್ಯಗಳು ಮತ್ತು ಅಪ್ಡೇಟ್ಗಳಿಗೆ ಆರಂಭಿಕ ಪ್ರವೇಶವನ್ನು ನೀಡುತ್ತದೆ.
"ನಮ್ಮ ಅಂದಾಜಿನ ಪ್ರಕಾರ ಚಾಟ್ ಜಿಪಿಟಿ ಸೆಪ್ಟೆಂಬರ್ನಲ್ಲಿ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇನಿಂದ 3.2 ಮಿಲಿಯನ್ ಡಾಲರ್ ಗಳಿಸಿದೆ. ಅಂದರೆ ಆಪಲ್ ಮತ್ತು ಗೂಗಲ್ ತಮ್ಮ ಪಾಲು ಪಡೆದುಕೊಂಡ ನಂತರ ಇಷ್ಟು ಓಪನ್ಎಐಗೆ ಉಳಿಯುತ್ತಿದೆ ಎಂದರ್ಥ" ಎಂದು ಆ್ಯಪ್ ಫಿಗರ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಸೆಪ್ಟೆಂಬರ್ನಲ್ಲಿ ಸುಮಾರು 15.6 ಮಿಲಿಯನ್ ಜನರು ಓಪನ್ಎಐನ ಚಾಟ್ ಜಿಪಿಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದಾರೆ.