ನವದೆಹಲಿ: 2023ರಲ್ಲಿ ಯೂಟ್ಯೂಬ್ನಲ್ಲಿ ಭಾರತೀಯರು ಅತಿ ಹೆಚ್ಚು ಇಷ್ಟಪಟ್ಟ ಹಾಗೂ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊಗಳು ಯಾವವು ಮತ್ತು ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಯಾರು ಎಂಬ ಪಟ್ಟಿಯನ್ನು ಗೂಗಲ್ ಬಿಡುಗಡೆಗೊಳಿಸಿದೆ. ಚಂದ್ರಯಾನ -3 ಸಾಫ್ಟ್ ಲ್ಯಾಂಡಿಂಗ್ ಲೈವ್ ಪ್ರಸಾರವು ಈ ವರ್ಷದ ಟಾಪ್ ಟ್ರೆಂಡಿಂಗ್ ವೀಡಿಯೊಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
"ಚಂದ್ರಯಾನ -3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಲೈವ್ ಟೆಲಿಕಾಸ್ಟ್ 8.5 ಮಿಲಿಯನ್ ಗರಿಷ್ಠ ಏಕಕಾಲಿಕ ವೀಕ್ಷಣೆಗಳನ್ನು ಕಂಡಿದೆ. ಇದು ಯೂಟ್ಯೂಬ್ನಲ್ಲಿ ಸಾರ್ವಕಾಲಿಕ ಅತಿದೊಡ್ಡ ಲೈವ್ ಸ್ಟ್ರೀಮ್ ಆಗಿದೆ" ಎಂದು ಕಂಪನಿ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಯೂಟ್ಯೂಬ್ ಚಾನೆಲ್ ರೌಂಡ್ 2 ಹೆಲ್ ನ (Round2hell) ಮೆನ್ ಆನ್ ಮಿಷನ್ (ಎಂಒಎಂ) ಈ ವರ್ಷದ ಎರಡನೇ ಟ್ರೆಂಡಿಂಗ್ ವೀಡಿಯೊವಾಗಿದ್ದು, ನಂತರದ ಸ್ಥಾನದಲ್ಲಿ ಯುಪಿಎಸ್ಸಿ - ಅನುಭವ್ ಸಿಂಗ್ ಬಸ್ಸಿ ಅವರ ಸ್ಟ್ಯಾಂಡ್ ಅಪ್ ಕಾಮಿಡಿ, ಕ್ಯಾರಿಮಿನಾಟಿ ಅವರ ಡೈಲಿ ವ್ಲಾಗರ್ಸ್ ಪ್ಯಾರಡಿ ಮತ್ತು ಇತರ ವೀಡಿಯೊಗಳಿವೆ.
ಗೇಮಿಂಗ್ ವೀಡಿಯೊಗಳ ವಿಭಾಗದಲ್ಲಿ ಗ್ರ್ಯಾಂಡ್ ಥೆಫ್ಟ್ ಆಟೋ (ಜಿಟಿಎ) ವಿಐ ಟ್ರೈಲರ್ 1 ಮ್ಯೂಸಿಕ್ ಇಲ್ಲದ ವೀಡಿಯೊ ಹೊಸ ವೀಕ್ಷಣೆಗಳ ದಾಖಲೆಯನ್ನು ನಿರ್ಮಿಸಿದೆ. ಇದು ಭಾರತದಲ್ಲಿ 24 ಗಂಟೆಗಳಲ್ಲಿ 93 ಮಿಲಿಯನ್ ವೀಕ್ಷಣೆ ಕಂಡಿದೆ ಎಂದು ಕಂಪನಿ ತಿಳಿಸಿದೆ. ಪವನ್ ಸಾಹು, ನೀತು ಭೀಸ್ಟ್, ಕ್ಯೂಟ್ ಡಾಟ್ ಶಿವಾನಿ 05, ಫಿಲ್ಮಿ ಸೂರಜ್, ಅಮನ್ ಡ್ಯಾನ್ಸರ್ ರಿಯಲ್ ಮತ್ತು ಇತರರು ಈ ವರ್ಷ ಯೂಟ್ಯೂಬ್ ನಲ್ಲಿ ಟಾಪ್ 10 ಭಾರತೀಯ ಕಂಟೆಂಟ್ ಕ್ರಿಯೇಟರ್ಗಳಾಗಿದ್ದಾರೆ.
"ಯೂಟ್ಯೂಬ್ನಲ್ಲಿ ದೇಶದ ವಿಭಿನ್ನ ಭಾಗಗಳಲ್ಲಿ ನೆಲೆಸಿರುವ ಕಂಟೆಂಟ್ ಕ್ರಿಯೇಟರ್ಗಳು ಮತ್ತು ಕಮ್ಯುನಿಟಿಗಳು ವೀಡಿಯೊಗಳನ್ನು ಅಪ್ಲೋಡ್ ಮಾಡುತ್ತಿರುವುದರಿಂದ ವಿಭಿನ್ನ ರೂಪದ ಬಹುಕಾಲ ಸ್ಮರಣೆಯಲ್ಲಿ ಉಳಿಯುವಂಥ ಕಂಟೆಂಟ್ಗೆ ಕಾರಣವಾಗಿದೆ" ಎಂದು ಯೂಟ್ಯೂಬ್ ಹೇಳಿದೆ. ಇದಲ್ಲದೆ, ತೇರೆ ವಾಸ್ತೆ, ಪಲ್ಸರ್ ಬೈಕ್, ಜೈಲರ್, ಕಂಪನಿ, ನಾ ರೆಡಿ ಮತ್ತು ಹೀರಿಯೆಯಂಥ ಮ್ಯೂಸಿಕ್ ವೀಡಿಯೊಗಳು ಮತ್ತು ಶಾರ್ಟ್ಸ್ ಟ್ರೆಂಡ್ ಗಳು ಟ್ರ್ಯಾಕ್ಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡಿದೆ ಎಂದು ಕಂಪನಿ ಹೇಳಿದೆ. ಪ್ರತಿ ನಿಮಿಷಕ್ಕೆ ಸುಮಾರು 500 ಗಂಟೆಗಳಿಗಿಂತ ಹೆಚ್ಚು ವೀಡಿಯೊವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗುತ್ತದೆ.
ಇದನ್ನೂ ಓದಿ : ಪ್ರತಿ 10ರಲ್ಲಿ 7 ಹದಿಹರೆಯದವರು ನಿತ್ಯ ಯೂಟ್ಯೂಬ್ ನೋಡ್ತಾರೆ; ಅಧ್ಯಯನ