ಕೋಲ್ಕತ್ತಾ (ಪಶ್ಚಿಮ ಬಂಗಾಳ):ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹವನ್ನು ಲ್ಯಾಂಡ್ ಮಾಡುವುದರ ಜೊತೆಗೆ, ಇಸ್ರೋ ಕೈಗೊಂಡ ಚಂದ್ರಯಾನ ಮಿಷನ್‌ಗಳು ವೈಜ್ಞಾನಿಕ ಸಮುದಾಯಕ್ಕೆ ರಹಸ್ಯ ಮಾಹಿತಿಯನ್ನು ಕಲೆಹಾಕುತ್ತಿದೆ. ಇದು ಭವಿಷ್ಯದಲ್ಲಿ ಮಾನವ ವಾಸ ಸೇರಿದಂತೆ ಎಲ್ಲ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ದಾರಿ ಮಾಡಿಕೊಟ್ಟಿದೆ ಎಂದು ಖ್ಯಾತ ವಿಜ್ಞಾನಿ ದೇಬಿಪ್ರಸಾದ್ ದುವಾರಿ ಹೇಳಿದ್ದಾರೆ.
ಇಸ್ರೋದ ಮೂರು ಚಂದ್ರಯಾನ ಮಿಷನ್‌ಗಳು ಚಂದ್ರನಲ್ಲಿ ನೀರಿನ ಮಂಜುಗಡ್ಡೆಯ ಇರುವಿಕೆ, ಖನಿಜಗಳು ಮತ್ತು ತಾಪಮಾನ ಬದಲಾವಣೆಯ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಿವೆ. ಎಲ್ಲ ಯೋಜನೆಗಳು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಯಾವತ್ತೂ ತಿಳಿಯದ ಮಾಹಿತಿಯನ್ನು ರವಾನಿಸಿವೆ. ಚಂದ್ರಯಾನ-1 ಮಿಷನ್‌ನಲ್ಲಿ ಚಂದ್ರನ ಖನಿಜಶಾಸ್ತ್ರವನ್ನು ಅಧ್ಯಯನ ಮಾಡುವ 'ಮ್ಯಾಪರ್' (ನಾಸಾ ಮತ್ತು ಇಸ್ರೋ ನಡುವಿನ ಸಹಯೋಗದ ಸಾಧನ) ಬಳಸಲಾಯಿತು. ಮೊದಲ ಬಾರಿಗೆ ಧ್ರುವ ಪ್ರದೇಶದ ಬಳಿ 60,000 ಕೋಟಿ ಲೀಟರ್ ನೀರಿನ ಮಂಜುಗಡ್ಡೆ ಇರುವುದನ್ನು ಪತ್ತೆ ಮಾಡಿತು. ಇದು ಚಂದ್ರನ ಮೇಲೆ ಮಾನವನ ವಾಸಕ್ಕಾಗಿ ಸಿಂಥೆಟಿಕ್ ಬಯೋಸ್ಪಿಯರ್ ರಚಿಸುವ ಸಾಧ್ಯತೆ ಬಗ್ಗೆ ಆಸೆ ಚಿಗುರಿಸಿದೆ ಎಂದು ಹೇಳಿದ್ದಾರೆ.
ಅತ್ಯಮೂಲ್ಯ ವಿಷಯಗಳ ರವಾನೆ:ಚಂದ್ರಯಾನ - 2 ಮಿಷನ್‌ನಲ್ಲಿ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಲು ವಿಫಲವಾಗಿದ್ದರೂ, ಆರ್ಬಿಟರ್ ನಾಲ್ಕು ವರ್ಷಗಳ ಕಾಲ ಚಂದ್ರನ ಸುತ್ತ ಸುತ್ತಿ ಅಲ್ಲಿನ ಮಾಹಿತಿ, ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿದೆ. ಇನ್ನು ಈಚೆಗೆ ಕೈಗೊಂಡ ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡ್ ಆಗಿ ಚಂದ್ರನ ದಕ್ಷಿಣ ಧ್ರುವದ ಬಳಿ ಸಲ್ಫರ್ ಇರುವಿಕೆಯ ಬಗ್ಗೆ ಈಗಾಗಲೇ ಮಾಹಿತಿ ಕಳುಹಿಸಿದೆ ಎಂದು ತಿಳಿಸಿದರು.