ಪುಣೆ(ಮಹಾರಾಷ್ಟ್ರ):ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-4 ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ, ಚಂದ್ರಯಾನ-4 ಕುರಿತು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು.
ಚಂದ್ರಯಾನ-4: ಉದ್ದೇಶವೇನು?: ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಇಸ್ರೋ ಲುಪೆಕ್ಸ್ ಹೆಸರಿನಲ್ಲಿ ಚಂದ್ರನಿಂದ ಕಲ್ಲು ಮತ್ತು ಮಣ್ಣಿನ ಮಾದರಿ ತರುವ ಯೋಜನೆಯತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ. ಇದಕ್ಕಾಗಿ ಚಂದ್ರನ ಧ್ರುವ ಪರಿಶೋಧನೆ ಮಿಷನ್ ಸಿದ್ಧಪಡಿಸುತ್ತಿದ್ದೇವೆ. ಚಂದ್ರಯಾನ-4ರ ಮೂಲಕ 90 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಇಳಿಸಲಾಗುವುದು. ಇದರ ಜೊತೆಗೆ 350 ಕೆ.ಜಿ ತೂಕದ ರೋವರ್ ಕಳುಹಿಸಲಾಗುವುದು. ಇದು ಚಂದ್ರನ ಮೇಲೆ ಒಂದು ಕಿಲೋಮೀಟರ್ ಸುತ್ತಲಿದೆ ಎಂದು ನಿಲೇಶ್ ದೇಸಾಯಿ ಹೇಳಿದರು.
'ಐದರಿಂದ 10 ವರ್ಷ ಸಮಯ': ಚಂದ್ರಯಾನ-3 ಮಿಷನ್ ಜೀವಿತಾವಧಿಯು ಒಂದು ಚಂದ್ರನ ದಿನವಾಗಿದೆ. ಅಂದರೆ ಭೂಮಿಯ ಮೇಲಿನ 14 ದಿನಗಳಿಗೆ ಸಮ. ಚಂದ್ರಯಾನ-4ರ ಜೀವಿತಾವಧಿಯು ಏಳು ಚಂದ್ರ ದಿನಗಳು. ಇದು ಭೂಮಿಯ ಮೇಲಿನ ಸುಮಾರು 100 ದಿನಗಳಾಗುತ್ತದೆ. ಈ ಸಮಯದಲ್ಲಿ, ರೋವರ್ನ ಉಪಕರಣಗಳು ಬಂಡೆಗಳನ್ನು ಸಂಗ್ರಹಿಸುತ್ತವೆ. ಚಂದ್ರನ ಮೇಲೆ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ಭೂಮಿಗೆ ತರುತ್ತದೆ. "ಈ ಯೋಜನೆಗೆ ಎರಡು ಉಡಾವಣಾ ವಾಹನಗಳನ್ನು ಸಿದ್ಧಪಡಿಸಬೇಕು. ಇದಕ್ಕೆ ಐದರಿಂದ ಹತ್ತು ವರ್ಷಗಳ ಸಮಯ ಬೇಕು" ಎಂದು ನೀಲೇಶ್ ದೇಸಾಯಿ ಮಾಹಿತಿ ನೀಡಿದರು. ಚಂದ್ರಯಾನ-3ರ ಯಶಸ್ಸಿನ ನಂತರ ಪ್ರಧಾನಿ ಮೋದಿ ಅವರು ದೊಡ್ಡ ಸವಾಲಿಗೆ ಸಿದ್ಧರಾಗುವಂತೆ ಇಸ್ರೋ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದಾರೆ. ಈ ಯೋಜನೆಗಾಗಿ ಜಪಾನ್ನ ಬಾಹ್ಯಾಕಾಶ ಸಂಸ್ಥೆ JAXAನೊಂದಿಗೆ ಇಸ್ರೋ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಚಂದ್ರಯಾನ-3 ಯೋಜನೆಯ ಕುರಿತು..: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಈ ಮೂಲಕ ಭಾರತವು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಯಿತು. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ 14 ದಿನಗಳ ಕಾಲ ಚಂದ್ರನ ಬಗ್ಗೆ ಅಮೂಲ್ಯ ಮಾಹಿತಿ ರವಾನಿಸಿದೆ.
ಇದನ್ನೂ ಓದಿ:ಚಂದ್ರಯಾನ-3 ರಾಕೆಟ್ ಭಾಗಗಳು ಭೂಮಿಯ ವಾತಾವರಣಕ್ಕೆ ಮರುಪ್ರವೇಶ: ಇಸ್ರೋ