ಬೆಂಗಳೂರು:ಯಾವುದೇ ರಾಷ್ಟ್ರಗಳು ಇದುವರೆಗೂ ತೆರಳದೇ ಇರುವ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಅನ್ನು ಇಳಿಸುವ ಮಹತ್ವಾಕಾಂಕ್ಷೆಯ ಗುರಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಚಂದ್ರಯಾನ-3 ನೌಕೆಯ ಕಕ್ಷೆ ಎತ್ತರಿಸುವ ಐದನೇ ಕಸರತ್ತನ್ನು ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿತು.
ಇಸ್ರೋ ಮಂಗಳವಾರ ಇಲ್ಲಿಯ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಆರ್‌ಎಸಿ) ನಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಐದನೇ ಕಕ್ಷೆ (ಭೂಮಿಯ ಸುತ್ತಲಿನ ಪೆರಿಜಿ ಫೈರಿಂಗ್ ಕಕ್ಷೆ) ಎತ್ತರಿಸುವ ಕುಶಲತೆ ಮೆರೆಯಿತು.
ಗಗನನೌಕೆಯು 127609 ಕಿಮೀ X 236 ಕಿಮೀ ಎತ್ತರದ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಮುಂದಿನ ಕಕ್ಷೆ ಎತ್ತಿರಿಸುವ ಕಾರ್ಯ ಆಗಸ್ಟ್ 1 ರಂದು ಮಧ್ಯರಾತ್ರಿ 12 ರಿಂದ 1 ಗಂಟೆಯ ನಡುವೆ ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಜುಲೈ 14 ರಂದು ಚಂದ್ರನ ಕಡೆಗೆ ಪ್ರಯಾಣ ಬೆಳೆಸಿರುವ ಚಂದ್ರಯಾನ -3 ನೌಕೆಯನ್ನು ಈಗಾಗಲೇ 4 ಬಾರಿ ಯಶಸ್ವಿಯಾಗಿ ಕಕ್ಷೆ ಬದಲಿಸಲಾಗಿದೆ. ಕಕ್ಷೆ ಬದಲಿಸುವ ಪ್ರಕ್ರಿಯೆಯಾದ ಟ್ರಾನ್ಸ್ಲೂನಾರ್ ಇಂಜೆಕ್ಷನ್(TLI) ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಭೂಮಿಯ ಕಕ್ಷೆಯಿಂದ ಬೇರ್ಪಟ್ಟು ಚಂದ್ರನ ಸಮೀಪಕ್ಕೆ ಕೊಂಡೊಯ್ಯಲು ನೆರವು ನೀಡುತ್ತದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಹ್ಯಾಕಾಶ ನೌಕೆಯು ಟಿಎಲ್ಯು ಸಾಹಸದ ನಂತರ ಭೂಮಿಯ ಕಕ್ಷೆಯನ್ನು ತೊರೆದು ಆಗಸ್ಟ್ 1 ರಂದು ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಬಳಿಕ ಅದು "ಚಂದ್ರನ ವರ್ಗಾವಣೆ ಪಥ" ದಲ್ಲಿ ಸಾಗುತ್ತದೆ. ಇದಾದ ಬಳಿಕ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುವುದಾಗಿ ಇಸ್ರೋ ಹೇಳಿದೆ.
ಯಾರೂ ಇಳಿಯದ ಜಾಗಕ್ಕೆ ಇಸ್ರೋ:ಚಂದ್ರನ ದಕ್ಷಿಣ ಧ್ರುವದಲ್ಲಿ ಈವರೆಗೂ ಯಾವುದೇ ದೇಶಗಳ ನೌಕೆಗಳು ಹೋಗಿಲ್ಲ. ಪ್ರಪ್ರಥಮ ಬಾರಿಗೆ ಇಸ್ರೋ ಈ ಸಾಹಸವನ್ನು ನಡೆಸುತ್ತಿದೆ. ಈ ಹಿಂದೆ ಚಂದ್ರಯಾನ-2 ನೌಕೆಯನ್ನು ದಕ್ಷಿಣ ಧ್ರುವದಲ್ಲಿ ಇಳಿಸುವ ಕೊನೆಯ ಕ್ಷಣಗಳಲ್ಲಿ ನೌಕೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲ್ಮೆಗೆ ಅಪ್ಪಳಿಸಿ ನಾಶವಾಗಿತ್ತು. ಬಾಹ್ಯಾಕಾಶ ಲೋಕದಲ್ಲಿ ಚರಿತ್ರೆ ಸೃಷ್ಟಿಸುವ ಅಂಚಿನಲ್ಲಿ ಇಸ್ರೋ ವಿಫಲವಾಗಿತ್ತು. ಈ ಬಾರಿ ನೌಕೆಯನ್ನು ಯಶಸ್ವಿ ಲ್ಯಾಂಡಿಂಗ್ ವಿಧಾನದ ಬದಲಾಗಿ, ವೈಫಲ್ಯ ಆಧರಿತ ಲ್ಯಾಂಡಿಂಗ್ ವಿಧಾನದ ಮೇಲೆ ಇಳಿಸುವ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:Chandrayaan 3: ಚಂದ್ರಯಾನ 3 ಗಗನನೌಕೆಯ ಕಕ್ಷೆ ಬದಲಾವಣೆಯ ನಾಲ್ಕನೇ ಪ್ರಕ್ರಿಯೆ ಯಶಸ್ವಿ