ನವದೆಹಲಿ:ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಇನ್ನೊಂದು ವಿಕ್ರಮ ಸಾಧಿಸಿದೆ. ಚಂದ್ರನ ಕಕ್ಷೆಯಲ್ಲಿರುವ ಉಪಗ್ರಹದ ಲ್ಯಾಂಡರ್ ಮಾಡ್ಯೂಲ್ನಿಂದ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಇದೀಗ ಲ್ಯಾಂಡರ್ ಸ್ವತಂತ್ರವಾಗಿ ಚಂದ್ರನ ಅಂಗಳಕ್ಕೆ ಇಳಿಯಲು ಸಿದ್ಧವಾಗಿದೆ. ಇದೇ 23 ರಂದು ದಕ್ಷಿಣ ಧ್ರುವದಲ್ಲಿ ಸಾಫ್ಟ್ಲ್ಯಾಂಡಿಂಗ್ ನಡೆಯಲಿದೆ.
ಚಂದ್ರಯಾನ-3 ನೌಕೆಯ ಲ್ಯಾಂಡರ್‌ಗೆ ಭಾರತೀಯ ಬಾಹ್ಯಾಕಾಶ ಯಾನಗಳ ಪಿತಾಮಹರಾದ ವಿಕ್ರಮ್ ಸಾರಾಭಾಯ್ ಅವರ ಹೆಸರಿಡಲಾಗಿದೆ. ಇಂದು (ಬುಧವಾರ) ರೋವರ್ ಹೊಂದಿರುವ ಲ್ಯಾಂಡರ್ ಅನ್ನು ನೌಕೆಯಿಂದ ಬೇರ್ಪಡಿರುವ ಸಾಹಸವನ್ನು ಇಸ್ರೋ ವಿಜ್ಞಾನಿಗಳು ನಾಜೂಕಾಗಿ ನಡೆಸಿ ಯಶಸ್ವಿಯಾಗಿದ್ದಾರೆ.
ಚಂದ್ರನ ಸನಿಹದಲ್ಲಿ ಲ್ಯಾಂಡರ್:ಈವರೆಗೂ ಚಂದ್ರನ ಕಕ್ಷೆ ಇಳಿಸುವ ಐದು ಪ್ರಕ್ರಿಯೆಗಳಲ್ಲಿ ಅತಿ ಸೂಕ್ಷ್ಮವಾದ ಪ್ರಕ್ರಿಯೆ ಇದಾಗಿತ್ತು. ಚಂದ್ರಯಾನ-3 ಉಪಗ್ರಹ ಆಗಸ್ಟ್ 5 ರಂದು ಚಂದ್ರನ ಕಕ್ಷೆ ಸೇರುವ ಮುನ್ನ ಬಾಹುಬಲಿ ಎಂದೇ ಖ್ಯಾತಿಯಾಗಿರುವ ಜಿಎಸ್ಎಲ್ವಿ ಮಾರ್ಕ್ 3 ವಾಹಕದಲ್ಲಿ ಉಡಾವಣೆ ಮಾಡಲಾಗಿತ್ತು. ಅಂದಿನಿಂದ ಭೂಕಕ್ಷೆ ದಾಟಿ ಚಂದ್ರನ ಕಕ್ಷೆ ಸೇರಿ ಇದೀಗ ಚಂದಮಾಮನ ತೀರಾ ಸನಿಹಕ್ಕೆ ಸಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇ ಸ್ರೋ) ಜುಲೈ 14 ರಂದು ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸಿ ಇಂದಿಗೆ 33 ದಿನಗಳಾಗಿವೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನ ಮೇಲೆ ಉಪಗ್ರಹವನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ.