ಹೈದರಾಬಾದ್:ಕಗ್ಗತ್ತಲ ಪ್ರದೇಶವಾದ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅದರೊಳಗಿದ್ದ ಪ್ಯಗ್ಯಾನ್ ರೋವರ್ ಅನ್ನು ಯಶಸ್ವಿಯಾಗಿ ಹೊರತಂದಿದೆ. ಅದೀಗ ಚಂದ್ರನ ಮೇಲೆ ನಡೆದಾಡಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ.
ಈ ಬಗ್ಗೆ ಮಾಹಿತಿ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿರುವ ಇಸ್ರೋ, ಲ್ಯಾಂಡರ್ನಲ್ಲಿನ ಪ್ರಗ್ಯಾನ್ ರೋವರ್ ಹೊರಬಂದು ಚಂದ್ರನ ಮೇಲೆ ಸುತ್ತಾಟ ಶುರು ಮಾಡಿದೆ. ಇದು ಭಾರತವೇ ನಿರ್ಮಿಸಿದ ಸ್ವದೇಶಿ ರೋವರ್, ಚಂದ್ರನ ಮೇಲೆ ಈಗ ಭಾರತವಿದೆ ಎಂದು ತಿಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಗ್ಯಾನ್ ರೋವರ್ ಹೊತ್ತಿದ್ದ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ಅನ್ನು ಆಗಸ್ಟ್ 23 ರಂದು ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸಿತು. 4 ಗಂಟೆಗಳ ಬಳಿಕ ಲ್ಯಾಂಡರ್ನ ಬಾಕ್ಸ್ ತೆರೆದುಕೊಂಡು ಅದರಲ್ಲಿದ್ದ ಪ್ರಗ್ಯಾನ್ ರೋವರ್ ಹೊರಬಂದಿತ್ತು. ಇದೀಗ ಪೂರ್ವ ನಿಗದಿಯಂತೆ ಕಾರ್ಯಾಚರಣೆ ಆರಂಭಿಸಲು ಚಂದ್ರನ ಮೇಲ್ಮೈ ಮೇಲೆ ನಡೆದಾಟ ಕೂಡ ಆರಂಭಿಸಿದೆ.
'ಚಂದ್ರಯಾನ-3 ರೋವರ್ ಮೇಡ್ ಇನ್ ಇಂಡಿಯಾ! ಮೇಡ್ ಫಾರ್ ದಿ ಮೂನ್! ಲ್ಯಾಂಡರ್‌ನಿಂದ ಸಿಎಚ್-3 ರೋವರ್ ನಡೆದಾಡಿತು. ಭಾರತ ಚಂದ್ರನ ಮೇಲೆ ನಡೆದಾಡಿತು!' ಎಂದು ಇಸ್ರೋ ಎಕ್ಸ್ನಲ್ಲಿ ಬರೆದುಕೊಂಡಿದೆ.
ಇತಿಹಾಸ ಸೃಷ್ಟಿಸಿದ ಭಾರತ:ಚಂದ್ರನ ಮೇಲೆ ಇಳಿಯುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಈ ಅಪರೂಪದ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಭಾರತಕ್ಕೂ ಮೊದಲು ಅಮೆರಿಕ, ಹಿಂದಿನ ಸೋವಿಯತ್ ಒಕ್ಕೂಟ(ರಷ್ಯಾ) ಮತ್ತು ಚೀನಾದ ಉಪಗ್ರಹಗಳು ಚಂದ್ರನ ಮೇಲೆ ಇಳಿದಿವೆ. ಆದರೆ, ದಕ್ಷಿಣ ಧ್ರುವದಲ್ಲಿ ನೌಕೆಯೊಂದನ್ನು ಇಳಿಸಿದ ವಿಶ್ವದ ಮೊದ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು.
ಚಂದ್ರಯಾನ-3 ಮಿಷನ್ ಜುಲೈ 24 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತ್ತು. ಸತತ 41 ದಿನಗಳ ಬಳಿಕ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಇಸ್ರೋದ ಈ ಸಾಧನೆಯನ್ನು ಇಡೀ ವಿಶ್ವಗಣವೇ ಮೆಚ್ಚಿಕೊಂಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಈ ಯಶಸ್ಸು ಮುಂದಿನ ಯಾನಗಳಿಗೆ ದಾರಿದೀಪವಾಗಲಿದೆ ಎಂದು ಬಣ್ಣಿಸಲಾಗಿದೆ. ಪ್ರಧಾನಿ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ನಾಳೆ ಭೇಟಿ ಅಭಿನಂದಿಸಲಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3 ಸಕ್ಸಸ್: ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲು ಶನಿವಾರ ಬೆಂಗಳೂರಿಗೆ ಮೋದಿ ಆಗಮನ!