ಬೆಂಗಳೂರು:ಚಂದ್ರನ ಅಂಗಳದ ಅಧ್ಯಯನಕ್ಕೆ ಹೊರಟಿರುವ ಚಂದ್ರಯಾನ - 3 ಉಪಗ್ರಹ ಶಶಿಗೆ ಇನ್ನಷ್ಟು ಹತ್ತಿರವಾಗಿದೆ. ಬುಧವಾರ ಬೆಳಗ್ಗೆ 8.30 ಕ್ಕೆ ಚಂದ್ರನ ಕಕ್ಷೆ ಇಳಿಸುವ ಐದನೇ ಮತ್ತು ಕೊನೆಯ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಕೆಗೆ ಸಿದ್ಧವಾಗಿದೆ ಎಂದು ಇಸ್ರೋ ತಿಳಿಸಿದೆ.
ಮಹತ್ವಾಕಾಂಕ್ಷಿ ಚಂದ್ರಯಾನ ನೌಕೆಯು ಚಂದ್ರನ ಕಕ್ಷೆಯ ಸುತ್ತುವಿಕೆಯನ್ನು ನಿಲ್ಲಿಸಿದ್ದು, ಇನ್ನೊಂದು ವಾರದಲ್ಲಿ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ಗೆ ಸಿದ್ಧವಾಗುತ್ತಿದೆ. ಚಂದ್ರನ ಮೇಲ್ಮೇಗೆ ಉಪಗ್ರಹ ಇನ್ನಷ್ಟು ಹತ್ತಿರವಾಗಿದೆ. ಮಾಡ್ಯೂಲ್ಗಳು ಬೇರ್ಪಟ್ಟ ಬಳಿಕ ಲ್ಯಾಂಡಿಂಗ್ ಪ್ರಕ್ರಿಯೆ ನಡೆಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಮಶೋಧನಾ ಸಂಸ್ಥೆ ತಿಳಿಸಿದೆ.
"ಬುಧವಾರದ ಕಕ್ಷೆ ಇಳಿಸುವ ಪ್ರಕ್ರಿಯೆ ಅಲ್ಪ ಅವಧಿಯಲ್ಲಿ ಯಶಸ್ವಿಯಾಗಿದೆ. ಚಂದ್ರಯಾನ-3 ನೌಕೆಯನ್ನು ಉದ್ದೇಶಿಸಿದಂತೆ 153 ಕಿಮೀ x 163 ಕಿಮೀ ಕಕ್ಷೆಗೆ ಸೇರಿಸಲಾಗಿದೆ. ಇದರೊಂದಿಗೆ ಚಂದ್ರನ ಸುತ್ತುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇದು ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಬೇರ್ಪಡುವ ಸಮಯ. ಲ್ಯಾಂಡರ್ ಪ್ರತ್ಯೇಕ ಪ್ರಯಾಣಕ್ಕಾಗಿ ಸಜ್ಜುಗೊಳಿಸಲಾಗಿದೆ" ಎಂದು ಇಸ್ರೋ ಟ್ವೀಟ್ ಮಾಡಿದೆ.
ನಾಳೆ ಮಾಡ್ಯೂಲ್ ಪ್ರತ್ಯೇಕಿಸುವ ಪ್ರಕ್ರಿಯೆ:ಲ್ಯಾಂಡರ್, ರೋವರ್ ಇರುವ ಲ್ಯಾಂಡರ್ ಮಾಡ್ಯೂಲ್ ಅನ್ನು ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಆಗಸ್ಟ್ 17 ರಂದು ಬೇರ್ಪಡಿಸಲು ಯೋಜಿಸಲಾಗಿದೆ. ಇದಾದ ಬಳಿಕ ಲ್ಯಾಂಡರ್ ಸ್ವತಂತ್ರವಾಗಿ ಚಂದ್ರನ ಅಂಗಳದತ್ತ ಪ್ರಯಾಣ ಬೆಳೆಸುತ್ತದೆ. ಅದಾದ ಬಳಿಕ ಆಗಸ್ಟ್ 23 ರಂದು ಸಾಫ್ಟ್ ಲ್ಯಾಂಡಿಂಗ್ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ-3 ನೌಕೆ ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಪ್ರವೇಶಿಸಿತು. ಅದರ ನಂತರ ಐದು ಸತತ ಕಕ್ಷೆ ಕಡಿತದ ಪ್ರಯೋಗ ನಡೆಸಿ ಚಂದ್ರನ ಹತ್ತಿರಕ್ಕೆ ತರಲಾಗಿದೆ. ಇನ್ನು ಕೆಲ ಕಾರ್ಯಾಚರಣೆಗಳ ಮೂಲಕ ಚಂದ್ರನ ಧ್ರುವಗಳ ಮೇಲೆ ನೌಕೆಯನ್ನು ಇರಿಸಲು ಇಸ್ರೋ ಪ್ರಯತ್ನಿಸಲಿದೆ.
ಲ್ಯಾಂಡರ್ ಮತ್ತು ರೋವರ್ ಸಂರಚನೆಯನ್ನು ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ 100 ಕಿಮೀ ಚಂದ್ರನ ಕಕ್ಷೆಯವರೆಗೆ ಸಾಗಿಸುತ್ತದೆ. ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿಮೆಟ್ರಿಕ್ ಮಾಪನಗಳನ್ನು ಅಧ್ಯಯನ ಮಾಡಲು ಪ್ರೊಪಲ್ಷನ್ ಮಾಡ್ಯೂಲ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ಥ್ (ಶೇಪ್) ಪೇಲೋಡ್ ಅನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು, ಚಂದ್ರನ ಮೇಲೆ ರೋವರ್ ತಿರುಗುವುದನ್ನು ಪ್ರದರ್ಶಿಸುವುದು ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಚಂದ್ರಯಾನ -3 ರ ಮಿಷನ್ನ ಪ್ರಮುಖ ಉದ್ದೇಶಗಳಾಗಿವೆ.
ಇದನ್ನೂ ಓದಿ:Chandrayaan-3 ಮತ್ತೊಂದು ಹಂತದ ಕಕ್ಷಾವರೋಹಣ; ಚಂದ್ರನಿಗೆ ಅತಿ ಸನಿಹದಲ್ಲಿ ನೌಕೆ