ನವದೆಹಲಿ: ಭಾರತದ ಚಂದ್ರಯಾನ -3 ನೌಕೆ ಚಂದ್ರನ ಮೇಲೆ ಇಳಿದ ಸ್ಥಳದ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಲೂನಾರ್ ರಿಕಾನೈಸನ್ಸ್ ಆರ್ಬಿಟರ್ (ಎಲ್ಆಆರ್ಒ) ಸೆರೆಹಿಡಿದಿದೆ. ಆಗಸ್ಟ್ 23 ರಂದು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಪ್ರಸ್ತುತ ಚಂದ್ರನ ದಕ್ಷಿಣ ಧ್ರುವದ ಬಳಿ ಇದೆ. ಚಂದ್ರಯಾನ -3 ಇಳಿದ ಸ್ಥಳ ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿಲೋಮೀಟರ್ ದೂರದಲ್ಲಿದೆ.
ನಾಸಾ ಆರ್ಬಿಟರ್ಗೆ ಜೋಡಿಸಲಾದ ಕ್ಯಾಮೆರಾ ವಿಕ್ರಮ್ ಲ್ಯಾಂಡರ್ ಇಳಿದ ನಾಲ್ಕು ದಿನಗಳ ನಂತರ ಲ್ಯಾಂಡರ್ ಓರೆ ನೋಟವನ್ನು (42 ಡಿಗ್ರಿ ಸ್ಲೀವ್ ಆಂಗಲ್) ಸೆರೆಹಿಡಿದೆ. ಜೂನ್ 18, 2009 ರಂದು ಉಡಾವಣೆಯಾದ ನಾಸಾ ಆರ್ಬಿಟರ್ ಇಲ್ಲಿಯವರೆಗೆ ಅತ್ಯಂತ ಮಹತ್ವದ ಮಾಹಿತಿಯ ಖಜಾನೆಯನ್ನೇ ಸಂಗ್ರಹಿಸಿದ್ದು, ಚಂದ್ರನ ಮೇಲಿನ ಪರಿಸ್ಥಿತಿಗಳ ಬಗ್ಗೆ ಸಾಕಷ್ಟು ಜ್ಞಾನ ಹಂಚಿಕೊಂಡಿದೆ. "ರಾಕೆಟ್ ಹೊಗೆಯಿಂದ ವಾಹನದ ಸುತ್ತಲೂ ಪ್ರಕಾಶಮಾನವಾದ ಹೊಳಪು ಉಂಟಾಗಿದೆ" ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.
ಆಗಸ್ಟ್ 23 ರಂದು ಚಂದ್ರಯಾನ -3 ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಭಾರತವು ಬಾಹ್ಯಾಕಾಶ ವಿಜ್ಞಾನದಲ್ಲಿ ದೈತ್ಯ ಹೆಜ್ಜೆ ಇಟ್ಟಿದೆ. ಅಮೆರಿಕ, ಚೀನಾ ಮತ್ತು ರಷ್ಯಾದ ನಂತರ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶ ಭಾರತವಾಗಿದೆ.
ಲ್ಯಾಂಡಿಂಗ್ ನಂತರ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಗಂಧಕ ಮತ್ತು ಇತರ ಸಣ್ಣ ಅಂಶಗಳ ಉಪಸ್ಥಿತಿಯನ್ನು ಕಂಡು ಹಿಡಿಯುವುದು, ಸಾಪೇಕ್ಷ ತಾಪಮಾನವನ್ನು ದಾಖಲಿಸುವುದು ಮತ್ತು ಅದರ ಸುತ್ತಲಿನ ಚಲನೆಗಳನ್ನು ಕೇಳುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸಿದೆ.