ನವದೆಹಲಿ :ಭಾರತ ಸೇರಿದಂತೆ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್ನ ದಿನ ಮತ್ತು ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ಮೂರೇ ದಿನಗಳಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಲಾದ ಜಾಗದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್ ಆಗಸ್ಟ್ 23 ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಇಳಿಯಲಿದೆ ಎಂದು ಇಸ್ರೋ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ಕೋಟ್ಯಂತರ ಭಾರತೀಯರ ಕನಸು ನನಸಾದಲ್ಲಿ, ಈ ವಿಕ್ರಮ ಸಾಧಿಸಿದ ವಿಶ್ವದ ನಾಲ್ಕನೇ ಮತ್ತು ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.
"ಚಂದ್ರಯಾನ-3 ಆಗಸ್ಟ್ 23, 2023 ರಂದು 06:04 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡರ್ ಇಳಿಯಲಿದೆ. ಇಷ್ಟು ದಿನಗಳ ಪ್ರಯಾಣಕ್ಕೆ ಶುಭ ಕೋರಿದ ಮತ್ತು ಸಕಾರಾತ್ಮಕ ಮನೋಭಾವಕ್ಕೆ ಧನ್ಯವಾದಗಳು. ಮುಂದಿನ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸೋಣ" ಎಂದು ಇಸ್ರೋ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದೆ. ಜೊತೆಗೆ ಈ ಸಾಹಸವನ್ನು ಇಸ್ರೋದ ವೆಬ್‌ಸೈಟ್, ಅದರ ಯೂಟ್ಯೂಬ್ ಚಾನಲ್, ಫೇಸ್ಬುಕ್ ಮತ್ತು ಡಿಡಿ ನ್ಯಾಷನಲ್ ಚಾನಲ್ನಲ್ಲಿ 05.27 ರಿಂದ ನೇರಪ್ರಸಾರ ಲಭ್ಯವಿರಲಿದೆ ಎಂದು ತಿಳಿಸಿದೆ.
ಚಂದ್ರನ ಮೇಲೆ 'ವಿಕ್ರಮ'":ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ಗೆ 'ವಿಕ್ರಮ್' ಎಂದು ಹೆಸರಿಸಲಾಗಿದೆ. ಅದರಲ್ಲಿರುವ ರೋವರ್ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಕೆಲ ದಿನಗಳ ಹಿಂದಷ್ಟೇ ಚಂದ್ರಯಾನ-3 ಗಗನನೌಕೆ ಪ್ರೊಪಲ್ಷನ್ ಮಾಡ್ಯೂಲ್ನಿಂದ ಲ್ಯಾಂಡರ್ ಮಾಡ್ಯೂಲ್ ಬೇರ್ಪಟ್ಟಿತ್ತು. ಇದಾದ ಬಳಿಕ ಸಾಫ್ಟ್ ಲ್ಯಾಂಡಿಂಗ್ಗೆ ನಿರ್ಣಾಯಕವಾದ 'ಡಿಬೂಸ್ಟಿಂಗ್' ನಡೆಸಿ ಚಂದ್ರನ ಸುಮಾರು 100 ಕಿಮೀ ಅಂತರದಲ್ಲಿ ಲ್ಯಾಂಡರ್ ಅನ್ನು ತಂದು ನಿಲ್ಲಿಸಲಾಗಿದೆ.