ಬೆಂಗಳೂರು:ಚಂದ್ರಯಾನ -3 ಬಾಹ್ಯಾಕಾಶ ನೌಕೆಯಲ್ಲಿನ ಲ್ಯಾಂಡರ್ ಸೆರೆಹಿಡಿದ ಎರಡು ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ. ಲ್ಯಾಂಡರ್ ಇಮೇಜರ್ (ಎಲ್ಐ) ಕ್ಯಾಮೆರಾ ಸೆರೆಹಿಡಿದ ಮೊದಲ ಚಿತ್ರವು ಭೂಮಿಯದ್ದಾಗಿದೆ. ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಮಿಷನ್ನ ಆರಂಭಿಕ ಹಂತದಲ್ಲಿ ತೆಗೆದ ಚಿತ್ರ ಇದಾಗಿದೆ. ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಹೆಸರಿನ ವಿಕ್ರಮ್ ಲ್ಯಾಂಡರ್ ಆಗಸ್ಟ್ 23, 2023 ರಂದು ಚಂದ್ರನ ಮೇಲೆ ಸಾಫ್ಟ್ ಲಾಂಡಿಂಗ್ ಆಗುವ ನಿರೀಕ್ಷೆಯಿದೆ.
ಎರಡನೇ ಚಿತ್ರವು ಆಗಸ್ಟ್ 6 ರಂದು ಬಾಹ್ಯಾಕಾಶ ನೌಕೆಯಲ್ಲಿನ ಲ್ಯಾಂಡರ್ ತನ್ನ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (ಎಲ್ಎಚ್ವಿಸಿ) ಮೂಲಕ ಸೆರೆಹಿಡಿದ ಚಂದ್ರನ ಚಿತ್ರವಾಗಿದೆ. ಚಿತ್ರಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಇಸ್ರೋ ಹೀಗೆ ಪೋಸ್ಟ್ ಮಾಡಿದೆ: "ಚಂದ್ರಯಾನ -3 ಮಿಷನ್: ಉಡಾವಣೆಯ ದಿನದಂದು ಲ್ಯಾಂಡರ್ ಇಮೇಜರ್ (ಎಲ್ಐ) ಕ್ಯಾಮೆರಾದಿಂದ ಸೆರೆಹಿಡಿದ ಭೂಮಿಯ ಚಿತ್ರ, ಚಂದ್ರನ ಕಕ್ಷೆಗೆ ಸೇರಿದ ಒಂದು ದಿನದ ನಂತರ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (ಎಲ್ಎಚ್ವಿಸಿ) ಸೆರೆಹಿಡಿದ ಚಂದ್ರನ ಚಿತ್ರ."
ಎಲ್ಐ ಕ್ಯಾಮೆರಾವನ್ನು ಗುಜರಾತಿನ ಅಹಮದಾಬಾದ್ನಲ್ಲಿರುವ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (ಎಸ್ಎಸಿ) ಮತ್ತು ಎಲ್ಎಚ್ವಿ ಕ್ಯಾಮೆರಾವನ್ನು ಕರ್ನಾಟಕದ ಬೆಂಗಳೂರು ಮೂಲದ ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (ಎಲ್ಇಒಎಸ್) ಅಭಿವೃದ್ಧಿಪಡಿಸಿವೆ. ಆಗಸ್ಟ್ 1 ರಂದು ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಸಮಯದಲ್ಲಿ ಚಂದ್ರಯಾನ -3 ಸೆರೆಹಿಡಿದ ಚಂದ್ರನ ವಿಡಿಯೋವನ್ನು ಇಸ್ರೋ ಈ ಹಿಂದೆ ಬಿಡುಗಡೆ ಮಾಡಿತ್ತು.