ಹೈದರಾಬಾದ್: ಟೆಕ್ ಜಗತ್ತಿನಲ್ಲಿ ಕಳೆದ ವರ್ಷ ಅತ್ಯಂತ ಹೆಚ್ಚು ಸುದ್ದಿಯಲ್ಲಿದ್ದ ಸ್ಯಾಮ್ ಆಲ್ಟ್ಮನ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಮದುವೆ. ಓಪನ್ಎಐನಿಂದ ವಜಾಗೊಂಡು ನಡೆದ ಹೈಡ್ರಾಮಾ ಬಳಿಕ ಮತ್ತೆ ತನ್ನ ಸಂಸ್ಥೆ ಸೇರಿದ್ದ ಸ್ಯಾಮ್, ಇದೀಗ ಬಹುಕಾಲದ ಗೆಳೆಯನನ್ನು ಮದುವೆಯಾಗಿದ್ದಾರೆ.
ಹವಾಯಿ ದ್ವೀಪದಲ್ಲಿ ನಡೆದ ಖಾಸಗಿ ಮದುವೆ ಸಮಾರಂಭದಲ್ಲಿ ಅವರು ಆಲಿವರ್ ಮುಲ್ಹೆರಿನ್ ಎಂಬವರನ್ನು ವರಿಸಿದ್ದಾರೆ. ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಗೆಳೆಯನ ಮದುವೆಯಾಗಿರುವುದನ್ನು ಆಲ್ಟ್ಮನ್ ದೃಢಪಡಿಸಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.
ಈ ಇಬ್ಬರು ತಮ್ಮ ಸಂಬಂಧವನ್ನು ಬಹುಕಾಲದಿಂದ ರಹಸ್ಯವಾಗಿಟ್ಟಿದ್ದರು. ಕಳೆದ ತಿಂಗಳು ಅಂದರೆ, ಸೆಪ್ಟೆಂಬರ್ 2023ರಲ್ಲಿ ನ್ಯೂಯಾರ್ಕ್ ಮ್ಯಾಗಜೀನ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸ್ಯಾಮ್ ಆಲ್ಟ್ಮನ್, ತಾವು ಆಲಿವರ್ ಮುಲ್ಹೆರಿನ್ ಅವರನ್ನು ಇಷ್ಟ ಪಡುತ್ತಿದ್ದು, ಅವರಿಂದ ಮಗು ಪಡೆಯುವ ಬಯಕೆ ಹೊಂದಿರುವುದಾಗಿ ಹೇಳಿದ್ದರು.
ಪ್ರಧಾನ ಮಂದಿ ನರೇಂದ್ರ ಮೋದಿ ಅವರಿಗೆ ಗೌರವ ಪೂರ್ವಕವಾಗಿ ಶ್ವೇತಭವನದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದ ಓಪನ್ ಎಐ ಸಿಇಒ, ತಮ್ಮ ಜೊತೆಗೆ ಆಲಿವರ್ ಅವರನ್ನು ಕರೆತರುವ ಮೂಲಕ ಮೊದಲ ಬಾರಿಗೆ ಈ ಜೋಡಿ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಯಾರು ಆಲಿವರ್ ಮುಲ್ಹೆರಿನ್?: ಆಲಿವರ್ ಮುಲ್ಹೆರಿನ್ ಲಿಂಕ್ಡಿನ್ ಪ್ರೊಫೈಲ್ ಮಾಹಿತಿ ಪ್ರಕಾರ, ಈತ ಆಸ್ಟ್ರೇಲಿಯನ್ ಸಾಫ್ಟ್ವೇರ್ ಇಂಜಿನಿಯರ್. ಈ ಹಿಂದೆ ಆಗಸ್ಟ್ 2020ಯಿಂದ 2022ರ ನವೆಂಬರ್ವರೆಗೆ ಮೆಟಾದಲ್ಲಿ ಕಾರ್ಯ ನಿರ್ವಹಿಸಿದ್ದಾಗಿ ತಿಳಿಸಿದ್ದಾರೆ.
ಕೃತಕ ಬುದ್ದಿಮತ್ತೆಯ ಚಾಟ್ಜಿಪಿಟಿಯ ಸೃಷ್ಟಿಕರ್ತ ಸ್ಯಾಮ್ ಆಲ್ಟಮನ್ ಅವರನ್ನು ಓಪನ್ಎ ಸಂಸ್ಥೆ ನಡುವಿನ ಗುದ್ದಾಟದಿಂದ ಸಂಸ್ಥೆ ವಜಾ ಮಾಡಿತ್ತು. ಹೀಗೆ ವಜಾಗೊಂಡ ಇವರಿಗೆ ಮೈಕ್ರೋಸಾಫ್ಟ್ ರೆಡ್ ಕಾರ್ಪೆಟ್ ಹಾಸಿತ್ತು. ಬಳಿಕ ಓಪನ್ಎಐ ಸಂಸ್ಥೆಯಲ್ಲಿ ನಡೆದ ದಿಢೀರ್ ಬೆಳವಣಿಗೆ ಮತ್ತು ಆಡಳಿ ಮಂಡಳಿಯ ನಡುವಿನ ಹೊಂದಾಣಿಕೆಯಿಂದ ಸ್ಯಾಮ್ ಆಲ್ಟ್ಮನ್ ಮತ್ತೆ ಓಪನ್ ಎಐ ಸೇರಿದ್ದರು.(ಐಎಎನ್ಎಸ್)
ಇದನ್ನೂ ಓದಿ: ಮರಳಿ ಗೂಡಿಗೆ: ಹೊಸ ಮಂಡಳಿಯೊಂದಿಗೆ ಓಪನ್ಎಐಗೆ ಸ್ಯಾಮ್ ಆಲ್ಟಮನ್