ವಾಷಿಂಗ್ಟನ್(ಯುಎಸ್): ಇತ್ತೀಚಿನ ಕ್ಲಿನಿಕಲ್ ಅಧ್ಯಯನದ ಪ್ರಕಾರ, ಶೈಶವಾವಸ್ಥೆಯಲ್ಲಿರುವ ಶಿಶುಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವ ಚಿಕಿತ್ಸೆಯು ದೀರ್ಘಕಾಲದ ಮಿದುಳಿನ ಹಾನಿಯನ್ನು ನಿವಾರಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನ ಜಾಮ(JAMA) ಜರ್ನಲ್‌ನಲ್ಲಿ ಪ್ರಕಟವಾಗಿದೆ.
ವಾಟರ್‌ಲೂ ವಿಶ್ವವಿದ್ಯಾನಿಲಯ ಮತ್ತು ಆಕ್ಲೆಂಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಹೈಪೊಗ್ಲಿಸಿಮಿಯಾ ಹೊಂದಿರುವ ನವಜಾತ ಶಿಶುಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಮಿದುಳಿನ ಹಾನಿಯನ್ನು ತಡೆಯುತ್ತದೆ ಎಂದು ಸಂಶೋಧಿಸಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದನ್ನು ಹೈಪೊಗ್ಲಿಸಿಮಿಯಾ ಎಂದೂ ಕರೆಯುತ್ತಾರೆ. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟವು ತುಂಬಾ ಕಡಿಮೆಯಾದಾಗ ಸಂಭವಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದು ಈಗ ಸಾಮಾನ್ಯವಾಗಿದೆ, ಜನಿಸಿದ ಆರು ಶಿಶುಗಳಲ್ಲಿ ಒಂದು ಮಗು ಈ ಕಾಯಿಲೆಯಿಂದ ಬಳಲುತ್ತಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ ಕಡಿಮೆ ಇರುವ ಕಾರಣ ದೇಹಕ್ಕೆ ಮತ್ತು ಮಿದುಳಿಗೆ ಬೆಳವಣಿಗೆ ಸಮಸ್ಯೆ ಆಗಬಹುದು ಮತ್ತು ನರಗಳ ಬೆಳವಣಿಗೆಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
ಮಗು ಹೈಪೊಗ್ಲಿಸಿಮಿಯಾಕ್ಕೆ ಒಳಗಾಗುವುದರಿಂದ ಮಿದುಳಿನ ಬೆಳವಣಿಗೆಯಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತದೆ. ಶಾಲಾ ಮಕ್ಕಳಲ್ಲಿ ಅವರ ಶೈಕ್ಷಣಿಕ ಬೆಳವಣಿಗೆಯನ್ನು ಅವರ ಸ್ನೇಹಿತರೊಂದಿಗೆ ಹೊಂದಾಣಿಸಿ ನೋಡಿದಾಗ ಇದು ತಿಳಿದುಬರುತ್ತದೆ. 'ಶಾಲೆಯ ವಾತಾವರಣ ಮತ್ತು ಅಲ್ಲಿಯ ಅನುಭವಗಳು ನಿಧಾನವಾಗಿ ಮಿದುಳಿದನ ಬೆಳವಣಿಗೆಗೆ ಸಹಕಾರವಾಗಬಹುದು. ಶಿಕ್ಷಣದಲ್ಲಿ ಸಿಗುವ ಪ್ರೋತ್ಸಾಹದ ಆಧಾರದಲ್ಲಿ ಆದು ಸಾಗುತ್ತದೆ' ಎಂದು ಆಪ್ಟೋಮೆಟ್ರಿ ಮತ್ತು ವಿಷನ್ ಸೈನ್ಸ್ ಸ್ಕೂಲ್‌ನ ಪ್ರಾಧ್ಯಾಪಕ ಬೆನ್ ಥಾಂಪ್ಸನ್ ಹೇಳಿದರು. ಈ ಅಧ್ಯಯನವನ್ನು ಹಾಂಗ್ ಕಾಂಗ್‌ನಲ್ಲಿರುವ ಸೆಂಟರ್ ಫಾರ್ ಐ ಆ್ಯಂಡ್ ವಿಷನ್ ರಿಸರ್ಚ್ ತಂಡ ಮಾಡಿದೆ.