ಲಾಸ್ ಏಂಜಲ್ಸ್: ಟ್ವಿಟರ್ ಸಿಇಒ ಆದ ಬಳಿಕ ಉದ್ಯಮಿ ಎಲೋನ್ ಮಸ್ಕ್ ಉದ್ಯೋಗಿಗಳ ವಜಾದಿಂದ ಬ್ಲೂ ಟಿಕ್ ಚಂದಾದಾರಿಕೆವರೆಗೆ ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅಲ್ಲದೇ ಈ ಸಂಬಂಧ ಮಸ್ಕ್ ಕೂಡ ಹಲವು ಟೀಕೆಗೆ ಗುರಿಯಾಗಿದ್ದಾರೆ. ಪ್ರಸ್ತುತ ಅನೇಕ ಖ್ಯಾತನಾಮರ ಬ್ಲೂ ಟಿಕ್ ಲೆಗಸಿಯನ್ನು ತೆಗೆದ ಕಾರಣಕ್ಕೆ ಹಲವರು ಮಸ್ಕ್ನ ಕಟು ಧೋರಣೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಬ್ಲೂ ಟಿಕ್ ಹೊಂದಿದ ಅನೇಕರು ಇದೀಗ ಪಾವತಿ ಮಾಡದ ಹಿನ್ನೆಲೆ ತಮ್ಮ ಲೆಗಸಿಯನ್ನು ಕಳೆದುಕೊಂಡಿದ್ದಾರೆ. ಟ್ವಿಟರ್ ಸಂಸ್ಥಾಪಕರಾದ ಜಾರ್ಕ್ ಡೋರ್ಸೆ ಕೂಡ ಹೊರತಾಗಿಲ್ಲ ಎಂಬುದು ಗಮನಿಸಬೇಕಾದ ವಿಷಯ.
ಏನಿದು ಟ್ವೀಟ್: ಆದಾಗ್ಯೂ, ಮಸ್ಕ್ ಕೆಲವು ಪ್ರಮುಖ ವ್ಯಕ್ತಿಗಳಿಗೆ ಯಾವುದೇ ಪಾವತಿ ಇಲ್ಲದೇ, ಈ ಬ್ಲೂ ಟಿಕ್ ಅನ್ನು ಮರು ನೀಡಿದ್ದಾರೆ. ಅದರಲ್ಲೂ ಮಸ್ಕ್ ಅವರ ಅಚ್ಚುಮೆಚ್ಚಿನ ಲೇಖಕರಲ್ಲಿ ಒಬ್ಬರಾಗಿರುವ ಸ್ಟೀಫನ್ ಕಿಂಗ್ ಕೂಡ ಈ ಬ್ಲೂ ಟಿಕ್ ಅನ್ನು ಪಡೆದಿದ್ದಾರೆ. ಆದರೆ, ಮಸ್ಕ್ ನೀಡಿರುವ ಈ ಪ್ರಯೋಚಿತ ಬ್ಲೂಟಿಕ್ ಸ್ಟೀಫನ್ ಕಿಂಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸ್ಟೀಫನ್ ಕಿಂಗ್, ತಮ್ಮ ಬ್ಲೂಟಿಕ್ ವೇರಿಫೀಕೇಷನ್ಗೆ ವ್ಯಯ ಮಾಡುತ್ತಿರುವ ಹಣವನ್ನು ಉಕ್ರೇನ್ ಮತ್ತು ರಷ್ಯಾ ಯುದ್ದಕ್ಕೆ ದಾನಮಾಡುವಂತೆ ಸಲಹೆ ನೀಡಿದ್ದಾರೆ.
ಮಸ್ಕ್ ಅವರು ತಮ್ಮ ಬ್ಲೂ ಚೆಕ್ ಪಾವತಿಯ ಚೆಕ್ ಅನ್ನು ದೇಣಿಗೆ ನೀಡುವುದು ಒಳಿತು. ಉಕ್ರೇನ್ ಯುದ್ಧ ಸಂತ್ರಸ್ತರಿಗೆ ಜೀವನಕ್ಕೆ ಸಹಾಯ ಮಾಡುತ್ತಿರುವ ಪ್ರತ್ಯುಲಾ ಫೌಂಡೇಷನ್ಗೆ ಈ ಹಣ ನೀಡಬೇಕು. ಕೇವಲ 8 ಅಮೆರಿಕನ್ ಡಾಲರ್ ಅಲ್ಲದೇ ಇನ್ನು ಹೆಚ್ಚು ಕೂಡ ಮಸ್ಕ್ ಅವರು ದೇಣಿಗೆ ನೀಡಬಹುದು ಎಂದು ಟ್ವೀಟ್ ಮೂಲಕ ಕಿಂಗ್ ತಿಳಿಸಿದ್ದಾರೆ. ಈ ಮೂಲಕ ತಾವು ಟ್ವಿಟರ್ಗೆ ಯಾವುದೇ ಪಾವತಿ ಮಾಡದಿದ್ದರೂ ಮಸ್ಕ್ ತಮಗೆ ಉಚಿತವಾಗಿ ನೀಡಿರುವ ಬ್ಲೂ ಟಿಕ್ ಸೇವೆಯನ್ನು ನಯವಾಗಿ ತಿರಸ್ಕರಿಸುವುದರ ಜೊತೆಗೆ ತಿರುಗೇಟು ನೀಡಿದ್ದಾರೆ.