ಸಮುದ್ರದಾಳ ನಮಗೆ ಗೊತ್ತಿರದ ನಿಗೂಢ ಪ್ರಪಂಚ. ಅಲ್ಲಿ ಅದೆಷ್ಟೋ ವಿಸ್ಮಯಕಾರಿ ಜೀವರಾಶಿಗಳ ಸಮೂಹವೇ ಇದೆ. ಹಿಂದೂ ಮಹಾಸಾಗರದ ಆಳದಲ್ಲಿ ಕಣ್ಣುಗಳಿಲ್ಲದ ಈಲ್ಗಳು, ಕೋರೆಹಲ್ಲುಗಳ ಮೀನುಗಳು, ಸಮುದ್ರದ ಅರ್ಚಿನ್ಗಳಂತಹ ವಿಚಿತ್ರವಾದ ಜೀವ ಸಂಕುಲಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಮ್ಯೂಸಿಯಮ್ಸ್ ವಿಕ್ಟೋರಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಂಡ ಆಸ್ಟ್ರೇಲಿಯಾದ ಕೋಕೋಸ್ (ಕೀಲಿಂಗ್) ಐಲ್ಯಾಂಡ್ಸ್ ಮೆರೈನ್ ಪಾರ್ಕ್ ಪ್ರದೇಶದ ಸಮುದ್ರದ ಆಳದಲ್ಲಿ ಮೊದಲ ಬಾರಿಗೆ ಅಧ್ಯಯನ ನಡೆಸಿ ಈ ವಿಚಿತ್ರ ಮತ್ತು ಅದ್ಭುತ ಜಲಜೀವಿಗಳನ್ನು ಗುರುತಿಸಿದೆ.
ಆಸ್ಟ್ರೇಲಿಯಾದ ವಿಜ್ಞಾನ ಏಜೆನ್ಸಿಯಾದ ಸಿಎಸ್ಐಆರ್ಒ ಇದೇ ಮೊದಲ ಬಾರಿಗೆ ನಿಗೂಢ ಸ್ಥಳವಾದ ಐಲ್ಯಾಂಡ್ಸ್ ಮೆರೈನ್ ಪಾರ್ಕ್ ಸಮುದ್ರದಾಳದಲ್ಲಿ ಸಂಶೋಧನಾ ನೌಕೆಯನ್ನು ಕಳುಹಿಸಿ, ಇಲ್ಲಿನ ಜೀವರಾಶಿಗಳ ಸಮೀಕ್ಷೆ ನಡೆಸಿದೆ. ಸಂಶೋಧನೆಯ ವೇಳೆ ಸಮುದ್ರದ ಆಳದಲ್ಲಿ ಪರ್ವತದ ಮಾದರಿಯಲ್ಲಿ ರೂಪಿತವಾದ ಜಲವಿಸ್ಮಯದ ಮೇಲೆ ಈ ಅದ್ಭುತ ಜೀವರಾಶಿಗಳು ಕಂಡುಬಂದಿವೆ. ಇವುಗಳನ್ನು 5 ಕಿಲೋಮೀಟರ್ ಆಳದಲ್ಲಿ ಪತ್ತೆ ಮಾಡಿ, ಸೆರೆಹಿಡಿಯಲಾಗಿದೆ.
ಕುರುಡು ಈಲ್ಸ್ಗಳು:ಅತ್ಯಂತ ಆಕರ್ಷಕವಾಗಿ ಕಂಡುಬರುವ ಈಲ್ಸ್ಗಳು ಕಣ್ಣು ಹೊಂದಿದ್ದರೂ ಕಾಣಿಸುವುದಿಲ್ಲ. ಸಡಿಲವಾದ ಪಾರದರ್ಶಕ ಚರ್ಮವನ್ನು ಇವುಗಳು ಹೊಂದಿದ್ದು, ಹೆಣ್ಣು ಮೀನುಗಳ ಸಂತಾನೋತ್ಪತ್ತಿಯವರೆಗೂ ಇವುಗಳು ಜೀವಿಸುತ್ತವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.