ಹೈದರಾಬಾದ್: ಮನೋರಂಜನೆ, ನಗದು ವಹಿವಾಟು, ಶಾಪಿಂಗ್ ಈಗ ಎಲ್ಲದಕ್ಕೂ ಫೋನ್ ಅತ್ಯಗತ್ಯ. ಇಂದು ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿದೆ. ಇದು ನಮಗೆ ವರವಾಗಿ ಪರಿಣಮಿಸಿದ್ದರೂ, ಕೆಲವೊಮ್ಮೆ ಅಪಾಯಗಳನ್ನು ತಂದೊಡ್ಡುತ್ತಿದೆ. ಇನ್ನು, ಇಂತಹ ವಿಷಯದಲ್ಲಿ ಹುಡುಗಿಯರು ಹೆಚ್ಚು ಜಾಗರೂಕರಾಗಿರಬೇಕು.
ನೀವು ನಿಮ್ಮ ಫೋನನ್ನು ಲಾಕ್ ಮಾಡುತ್ತಿದ್ದೀರಾ ? : ನಿಮ್ಮ ಮೊಬೈಲ್ನ್ನು ಲಾಕ್ ಮಾಡದೇ ಇರುವುದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಒಂದು ವೇಳೆ ನಿಮ್ಮ ಮೊಬೈಲ್ ಕಳೆದುಹೋದರೆ ನಿಮ್ಮ ಎಲ್ಲಾ ವಿವರಗಳು ಬೇರೆಯವರ ಕೈ ಸೇರುವ ಸಾಧ್ಯತೆ ಇರುತ್ತದೆ. ಇದರಿಂದ ಹಲವು ಅನಾಹುತಗಳು ಆಗಬಹುದು ಅಥವಾ ನಿಮ್ಮ ಮೊಬೈಲ್ ದುರ್ಬಳಕೆ ಆಗಬಹುದು. ಆದ್ದರಿಂದ ಯಾವುದೇ ಕೆಲಸವಿದ್ದರೂ ಸರಿ ಮೊಬೈಲ್ ಬಳಕೆ ಮಾಡುವುದಿಲ್ಲವೆಂದಾದರೆ ಲಾಕ್ ಮಾಡಿ.
ಇನ್ನು ನೀವು ಪಿನ್ ಅಥವಾ ಪ್ಯಾಟರ್ನ್ ಹಾಕುವ ಬದಲು, ಅಭಿವೃದ್ಧಿ ಹೊಂದಿದ ತಂತ್ರಜ್ಞಾನದಲ್ಲಿ ಹೆಬ್ಬೆಟ್ಟಿನ ಗುರುತು ಅಥವಾ ಮುಖ ಗುರುತಿಸುವಿಕೆ ಹಾಕುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಇಂದಿನ ತಂತ್ರಜ್ಞಾನ ಯುಗದಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನಮ್ಮ ಮೊಬೈಲಿನ ಪಿನ್ ಅಥವಾ ಪ್ಯಾಟರ್ನ್ ನ್ನು ಕಂಡುಹಿಡಿಯಬಹುದಾಗಿದೆ. ಅಲ್ಲದೆ ನಿಮ್ಮ ಬಗ್ಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿಯೂ ನಿಮ್ಮ ಪಾಸ್‌ವರ್ಡ್ ಕಂಡುಹಿಡಿಯಬಹುದು. ಆದ್ದರಿಂದ ಫಿಂಗರ್‌ಪ್ರಿಂಟ್ ಮತ್ತು ಫೇಸ್ ರೀಡಿಂಗ್ ಮೂಲಕ ನಾವು ನಮ್ಮ ಮೊಬೈಲನ್ನು ಸುರಕ್ಷಿತವಾಗಿರಿಸಬಹುದು.
ಬಳಸಿದ ಅಪ್ಲಿಕೇಷನ್ನ್ನು ಲಾಗ್ ಔಟ್ ಮಾಡಿ : ಇಂದು ಎಲ್ಲರೂ ಆನ್ಲೈನ್ನಲ್ಲೇ ಹೆಚ್ಚು ಖರೀದಿಯಲ್ಲಿ ತೊಡಗಿದ್ದಾರೆ. ಈ ವೇಳೆ ನಾವು ಬಳಸುವ ಅಪ್ಲಿಕೇಶನ್‌ಗಳು ಸಾಕಷ್ಟು ಅನುಮತಿಗಳನ್ನು ಕೇಳುತ್ತವೆ. ಅಂದರೆ ಇದರರ್ಥ, ನಮ್ಮ ಎಲ್ಲ ಮಾಹಿತಿ ಅವರ ಕೈಯಲ್ಲಿರುತ್ತದೆ. ಆದ್ದರಿಂದ, ಯಾವುದೇ ಖರೀದಿ ಮತ್ತು ವ್ಯವಹಾರವನ್ನು ಪೂರ್ಣಗೊಳಿಸಿದ ನಂತರ ಅಪ್ಲಿಕೇಷನ್ನನ್ನು ಲಾಗ್ ಔಟ್ ಮಾಡುವುದು ಒಳ್ಳೆಯದು.
ಇನ್ನು ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿನ ವೈ-ಫೈ ಬಳಸುವಾಗ, ನಮ್ಮ ಬ್ಯಾಂಕ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವುದನ್ನು ತಪ್ಪಿಸಬೇಕು. ಈ ವೇಳೆ 'ಫೈಲ್ ಶೇರಿಂಗ್ನ್ನು ನಿಷ್ಕ್ರಿಯಗೊಳಿಸುವುದು ಉತ್ತಮ. ಇನ್ನು, ವೆಬ್‌ಸೈಟ್‌ಗಳನ್ನು ತೆರೆಯುವುದಾದರೆ HTTPS ನೊಂದಿಗೆ ವೆಬ್‌ಸೈಟ್‌ಗಳನ್ನು ತೆರೆಯಿರಿ. ಬ್ರೌಸರ್‌ಗೆ HTTPS ಎಂದು ಸೇರಿಸುವುದರಿಂದ ಸುರಕ್ಷಿತವಾಗಿ ಅಂತರ್ಜಾಲ ಬಳಕೆ ಮಾಡಬಹುದು. ನಿಮಗೆ ಚೆನ್ನಾಗಿ ತಿಳಿದಿರುವ ವೈ-ಫೈಗೆ ಮಾತ್ರ ಆಟೋಮೆಟಿಕ್ ಕನೆಕ್ಟ್ನ್ನು ಬಳಸಿ.
ಆ್ಯಪ್ಗಳಿಗೆ ಪ್ರತ್ಯೇಕ ಪಾಸ್‌ವರ್ಡ್ ಬಳಸಿ :ಇನ್ನು ಎಲ್ಲಾ ಲಾಕ್ಗಳಿಗೆ ನಾವು ಒಂದೇ ರೀತಿಯ ಪಾಸ್‌ವರ್ಡ್ ಬಳಕೆ ಮಾಡುವುದನ್ನು ತಪ್ಪಿಸಬೇಕು. ಪ್ರತಿಯೊಂದಕ್ಕೂ ಪ್ರತ್ಯೇಕ ಲಾಕ್ಗಳನ್ನು ಬಳಸಿ. ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನು ಹಾಕಬಾರದು. ಇನ್ನು ಅಪ್ಲಿಕೇಶನ್‌ಗಳು ತಾಂತ್ರಿಕ ದೋಷಗಳನ್ನು ಹೊಂದಿರಬಹುದು. ಪ್ರತಿ ಅಪ್ಲಿಕೇಶನ್ ಕೇಳುವ ಅನುಮತಿಗಳನ್ನು ತಿರಸ್ಕರಿಸಿ. ಅನಗತ್ಯ ಎಂದು ತೋರುವ ಅಪ್ಲಿಕೇಶನ್‌ಗಳನ್ನು ಮೊಬೈಲಿನಿಂದ ತೆಗೆದುಹಾಕಿದರೆ ಉತ್ತಮ.
ಸ್ಮಾರ್ಟ್ ಫೋನ್ ಇದ್ದರಷ್ಟೇ ಸಾಲದು, ನೀವು ಕೂಡ ಸ್ಮಾರ್ಟ್ ಆಗಬೇಕು : ಫೋನ್ ತಯಾರಿಕಾ ಕಂಪನಿಗಳು ಕಾಲಕಾಲಕ್ಕೆ ತಾಂತ್ರಿಕ ದೋಷಗಳನ್ನು ಸರಿಪಡಿಸಿ ನಮ್ಮ ಮೊಬೈಲ್ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ. ಇನ್ನು, ಹೆಚ್ಚಿನ ಮೊಬೈಲ್ಗಳಲ್ಲಿ 'ರಿಮೋಟ್ ಆಪ್ಶನ್' ಇರುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್ ಕಳೆದುಹೋದರೆ ಇದರ ಸಹಾಯದಿಂದ ನೀವು ನಿಮ್ಮ ಫೋನ್‌ನಲ್ಲಿರುವ ಮಾಹಿತಿಯನ್ನು ಅಳಿಸಿಹಾಕಬಹುದು.
ಜ್ಯೂಸ್ ಜಾಕಿಂಗ್ ಬಗ್ಗೆ ಎಚ್ಚರದಿಂದಿರಿ : ನಾವು ಎಲ್ಲಾದರೂ ಹೊರಗಡೆ ಹೋಗುವಾಗ ಫೋನ್ ಎಷ್ಟು ಚಾರ್ಜ್ ಇದೆ ಎಂದು ನೋಡುತ್ತೇವೆ. ಆದರೆ ಇದೀಗ ಹಲವು ಚಾರ್ಜಿಂಗ್ ಸ್ಟೇಷನ್‌ಗಳು/ಪಾಯಿಂಟ್‌ಗಳು ಹಲವೆಡೆ ಲಭ್ಯವಿದೆ. ಇವುಗಳ ಬಗ್ಗೆ ನಾವು ಎಚ್ಚರವಹಿಸಬೇಕು.ಇವುಗಳು ಹ್ಯಾಕರ್‌ಗಳ ಕೈಯಲ್ಲಿರಬಹುದು.ಒಂದು ವೇಳೆ ಫೋನ್ ಚಾರ್ಜ್ ಮಾಡಲು ಬಳಸುವ ಚಾರ್ಜಿಂಗ್ ಕೇಬಲ್ಗಳಿಂದಲೇ ನಮ್ಮ ಮಾಹಿತಿಗಳನ್ನು ಕಳವು ಮಾಡುವ ಸಾಧ್ಯತೆಗಳಿರುತ್ತದೆ. ಇದನ್ನು ನಾವು 'ಜ್ಯೂಸ್ ಜಾಕಿಂಗ್' ಎಂದು ಕರೆಯುತ್ತೇವೆ. ಈ ತೊಂದರೆಯಿಂದ ಪಾರಾಗಲು ಮನೆಯಲ್ಲೇ ಅಥವಾ ವಾಹನದಲ್ಲಿ ಮೊಬೈಲ್ ಚಾರ್ಜ್ ಮಾಡಿ. ಅಗತ್ಯ ಬಿದ್ದರೆ ಪವರ್ ಬ್ಯಾಂಕ್ಗಳನ್ನು ಜೊತೆಗೆ ಒಯ್ಯಿರಿ.
ಇದನ್ನೂ ಓದಿ :ಭಾರತದಲ್ಲಿ ಐಫೋನ್ 16 ಉತ್ಪಾದನೆಗೆ ಯೋಜನೆ: ಭೂಮಿಗಾಗಿ ಅರ್ಜಿ ಸಲ್ಲಿಸಿದ ಆ್ಯಪಲ್ ಕಂಪನಿ