ಲಂಡನ್ (ಯುಕೆ) :2019 ರಲ್ಲಿ ಡೋರಿಯನ್ ಚಂಡಮಾರುತದಿಂದ ಉಂಟಾದ ವಿನಾಶದ ಕಾರಣದಿಂದ ಅಳಿವಿನಂಚಿನಲ್ಲಿರುವ ಬಹಾಮಾ ವಾರ್ಬ್ಲರ್ ಪಕ್ಷಿಯು ಕೇವಲ ಒಂದು ದ್ವೀಪದಲ್ಲಿ ಬದುಕುಳಿದಿರಬಹುದು ಎಂದು ಪೂರ್ವ ಆಂಗ್ಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ಚಂಡಮಾರುತ ಅಪ್ಪಳಿಸುವ ಮೊದಲು ಗ್ರ್ಯಾಂಡ್ ಬಹಾಮಾದಲ್ಲಿ ಪಕ್ಷಿಗಳ ಆವಾಸ ಸ್ಥಾನಗಳು ಮತ್ತು ಅರಣ್ಯ ಪರಿಸರ ಹೇಗಿತ್ತು ಎಂಬುದರ ಬಗ್ಗೆ ಹೊಸ ಅಧ್ಯಯನ ಕೆಲ ಮಾಹಿತಿಗಳನ್ನು ನೀಡಿದೆ. ಆದರೆ ಡೋರಿಯನ್ ಚಂಡಮಾರುತದಿಂದ ಗ್ರ್ಯಾಂಡ್ ಬಹಾಮಾದಲ್ಲಿ ಪಕ್ಷಿಗಳ ಆವಾಸಸ್ಥಾನ ನಾಶವಾದ ನಂತರ ವಾರ್ಬ್ಲರ್ ಈಗ ನೆರೆಯ ಅಬಾಕೊ ದ್ವೀಪದಲ್ಲಿ ಮಾತ್ರ ಬದುಕುಳಿಯಬಹುದು ಎಂದು ಸಂಶೋಧಕರ ತಂಡ ಹೇಳಿದೆ.
ಈ ಹಿಂದೆ ವಿನಾಶವಾಗಿದೆ ಎಂದು ಭಾವಿಸಲಾದ, ಅಳಿವಿನಂಚಿನಲ್ಲಿರುವ ಬಹಾಮಾ ನುಥಾಚ್ ಹೆಸರಿನ ಜೀವಂತ ಪಕ್ಷಿಯನ್ನು ಕೊನೆಯ ಬಾರಿಗೆ ಪತ್ತೆ ಮಾಡಿದ್ದ ಸಂಶೋಧಕರ ತಂಡ ಈ ಸಂಶೋಧನೆ ಮಾಡಿರುವುದು ಗಮನಾರ್ಹ. ಯುಎಇಯ ಮಾಸ್ಟರ್ಸ್ ಇನ್ ಅಪ್ಲೈಡ್ ಎಕಾಲಜಿ ಮತ್ತು ಕನ್ಸರ್ವೇಶನ್ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳಾದ ಡೇವಿಡ್ ಪಿರೇರಾ ಮತ್ತು ಮ್ಯಾಥ್ಯೂ ಗಾರ್ಡನರ್ ಎಂಬ ವಿದ್ಯಾರ್ಥಿಗಳು ಇದರ ಫೀಲ್ಡ್ ವರ್ಕ್ ಮಾಡಿದ್ದಾರೆ. ಬಹಾಮಾ ವಾರ್ಬ್ಲರ್ ಮತ್ತು ಬಹಾಮಾ ನುಥಾಚ್‌ಗಾಗಿ ದ್ವೀಪದಲ್ಲಿ ಮೂರು ತಿಂಗಳ ಕಾಲ ಸಮೀಕ್ಷೆ ನಡೆಸಿದ್ದಾರೆ.
ಈ ಸಂಶೋಧನೆಯ ಬಗ್ಗೆ ಮಾತನಾಡಿದ ಯುಎಇ ಜೈವಿಕ ವಿಜ್ಞಾನಗಳ ಶಾಲೆಯ ವಿದ್ಯಾರ್ಥಿಗಳ ಮೇಲ್ವಿಚಾರಕಿ ಪ್ರೊ ಡಯಾನಾ ಬೆಲ್, ಬಹಾಮಾಸ್‌ನ ಅರ್ಧಕ್ಕಿಂತ ಹೆಚ್ಚು ಸ್ಥಳೀಯ ಪಕ್ಷಿಗಳು ಜಾಗತಿಕ ಅಳಿವಿನ ಅಪಾಯದಲ್ಲಿವೆ ಎಂದು ನಿರ್ಣಯಿಸಲಾಗಿದ್ದರೂ, ಈ ಪರಿಸ್ಥಿತಿಯ ಸುಧಾರಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದರು. ಬಹಾಮಾ ವಾರ್ಬ್ಲರ್ ಇದು ಸ್ವಲ್ಪ ಬೂದು ಮತ್ತು ಹಳದಿ ವರ್ಣದ ಹಕ್ಕಿಯಾಗಿದ್ದು, ಉದ್ದನೆಯ ಕೊಕ್ಕು ಹೊಂದಿರುತ್ತದೆ. ಇದು ಬಹಾಮಾಸ್‌ನ ಗ್ರ್ಯಾಂಡ್ ಬಹಾಮಾ ಮತ್ತು ಅಬಾಕೊ ದ್ವೀಪಗಳಲ್ಲಿ ಮಾತ್ರ ಕಂಡುಬರುತ್ತದೆ.