ಗದ್ವಾಲ್(ತೆಲಂಗಾಣ):ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಪೆಟ್ರೋಲ್, ಡೀಸೆಲ್ ವಾಹನಗಳಿಂದ ಮಾಲಿನ್ಯವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ. ಆದರೆ, ಇವುಗಳ ಬೆಲೆ ದುಬಾರಿಯಾಗಿದೆ. ಆಟೋ ಚಾಲಕನೊಬ್ಬ ಎಲೆಕ್ಟ್ರಿಕ್ ಆಟೋ ಖರೀದಿಸಲು ಮುಂದಾಗಿದ್ದ. ಆದರೆ, ದುಬಾರಿಯಾದ ಕಾರಣ ಆತನೇ, ಶ್ರಮವಹಿಸಿ ಎಲೆಕ್ಟ್ರಿಕ್ ಆಟೋವನ್ನು ತಯಾರಿಸಿದ್ದಾನೆ. ಮುಂದುವರಿದು ಆತ, ಎಲೆಕ್ಟ್ರಿಕ್ ಕಾರನ್ನೂ ರೂಪಿಸಿದ್ದಾನೆ. ಮತ್ತು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಯುವ ಕಾರ್ನೀವಲ್‌ನಲ್ಲಿ ಪ್ರದರ್ಶಿಸಿ ಮೆಚ್ಚುಗೆಗೂ ಪಾತ್ರನಾಗಿದ್ದಾನೆ.
ಗದ್ವಾಲ ಜಿಲ್ಲೆಯ ಉಂಡವಳ್ಳಿ ಮಂಡಲದ ಬೊಂಕೂರು ಗ್ರಾಮದ ಆಟೋ ಚಾಲಕ ಬೀಚುಪಲ್ಲಿ ಈ ಆವಿಷ್ಕಾರದ ಹಿಂದಿನ ನಿರ್ಮಾತೃ. ಓದಿದ್ದು ಡಿಗ್ರಿ ಆದರೂ ಕೆಲಸ ಸಿಗದೇ ನಿರುದ್ಯೋಗಿಯಾಗಿದ್ದ. ಜೀವನ ನಿರ್ವಹಣೆಗಾಗಿ ಆತ, ಆಟೋ ಚಾಲಕ ವೃತ್ತಿ ಆಯ್ದುಕೊಂಡಿದ್ದ. ಕರ್ನೂಲ್ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಇಂಧನ ಬೆಲೆ ಹೆಚ್ಚಿದ ಕಾರಣ ಎಲೆಕ್ಟ್ರಿಕ್ ಆಟೋ ಖರೀದಿಸಲು ನಿರ್ಧರಿಸಿದ್ದ. ಆದರೆ ಸಾಮಾನ್ಯ ಆಟೋಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಆಟೋಗಳ ಬೆಲೆ ತುಸು ದುಬಾರಿ. ಅದನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಭಾವಿಸಿದ ಆತ ತಾನೇ ಒಂದು ಎಲೆಕ್ಟ್ರಿಕ್ ಆಟೋ ರೂಪಿಸಲು ಪ್ಲಾನ್ ಮಾಡಿದ್ದಾನೆ. ಕೇವಲ 80 ಸಾವಿರ ರೂಪಾಯಿ ವೆಚ್ಚದಲ್ಲಿ ಹಳೆಯ ಎಲೆಕ್ಟ್ರಿಕ್ ವಾಹನಗಳ ಬಿಡಿ ಭಾಗಗಳೊಂದಿಗೆ ಆಟೋ ತಯಾರಿಸಿದ್ದಾನೆ. ಕಡಿಮೆ ವೆಚ್ಚದಲ್ಲಿ ಜನರಿಗೆ ಸೇವೆ ನೀಡುತ್ತಿದ್ದಾನೆ.
ಎಲೆಕ್ಟ್ರಿಕ್ ಕಾರು ತಯಾರಿ:ಇಷ್ಟಕ್ಕೇ ಬಿಡದ ಆತ, ಕಾರೊಂದನ್ನು ತಾನೇ ರೂಪಿಸಿದ್ದಾನೆ. ತಾನು ಪಡೆದಿದ್ದ ವಾಹನ ತಯಾರಿಕಾ ಅನುಭವದಿಂದ ಮಾರುತಿ 800 ಕಾರಿನ ಹಳೆಯ ಭಾಗಗಳನ್ನು ಸಂಗ್ರಹಿಸಿ, ಎಲೆಕ್ಟ್ರಿಕ್ ಕಾರಿಗೆ ಬೇಕಾದ ಬಿಡಿಭಾಗಗಳನ್ನು ದೆಹಲಿಯಲ್ಲಿ ಖರೀದಿಸಿ ತಂದಿದ್ದಾನೆ. 4 ಬ್ಯಾಟರಿಗಳು, ಡಿಸಿ ಮೋಟಾರ್, 48 ವ್ಯಾಟ್ ಕಂಟ್ರೋಲರ್ ಮತ್ತು ಇತರ ಸಾಧನಗಳನ್ನು ಬಳಸಿ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ್ದಾನೆ. ಇದಕ್ಕೆ ಕೇವಲ 1.20 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಅಚ್ಚರಿ ಅಂದರೆ ಕೇವಲ ಒಂದೇ ದಿನದಲ್ಲಿ ಈ ಎಲೆಕ್ಟ್ರಿಕ್ ಕಾರನ್ನು ಈತ ಸಿದ್ಧಪಡಿಸಿದ್ದಾನಂತೆ.