ನವದೆಹಲಿ: ತೈವಾನ್ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿ ಆಸೂಸ್ ಕೈಗೆಟುಕುವ ಕ್ರೋಮ್ಬುಕ್ ಸಿಎಕ್ಸ್ 1 ಲ್ಯಾಪ್ಟಾಪ್ ಸರಣಿಯನ್ನು ಭಾರತದಲ್ಲಿ ಶುಕ್ರವಾರ ಬಿಡುಗಡೆ ಮಾಡಿದೆ. 14 ಮತ್ತು 15 ಇಂಚಿನ ಹಗುರ ಮತ್ತು ಸುಸ್ಥಿರ ಮಾದರಿಗಳಲ್ಲಿ ಇದು ಲಭ್ಯವಾಗಲಿದೆ. ಆಸೂಸ್ ಕ್ರೋಮ್ ಬುಕ್ ಸಿಎಕ್ಸ್ 1400 ಮತ್ತು ಸಿಎಕ್ಸ್ 1500 ಇವುಗಳ ಬೆಲೆ 21,990 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಸೀಮಿತ ಅವಧಿಗೆ ಇವುಗಳನ್ನು ಫ್ಲಿಪ್ಕಾರ್ಟ್ನಲ್ಲಿ 18,990 ರೂ. ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.
ಈ ಸಾಧನಗಳು ಇಂಟೆಲ್ ಸೆಲೆರಾನ್ ಎನ್ 4500 ಪ್ರೊಸೆಸರ್, ಇಮ್ಮರ್ಸಿವ್ ಲೇ-ಫ್ಲಾಟ್ ಡಿಸ್ ಪ್ಲೇ, ವೈ-ಫೈ 6 ಮತ್ತು 11 ಗಂಟೆಗಳ ಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಹೊಂದಿವೆ. ಉತ್ತಮ ಗುಣಮಟ್ಟದ 3-ಸೆಲ್ 50 ವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು 45 ವ್ಯಾಟ್ ಫಾಸ್ಟ್ ಯುಎಸ್ಬಿ-ಸಿ ಚಾರ್ಜಿಂಗ್ ಪೋರ್ಟ್ ಇದರಲ್ಲಿದೆ.
ಫ್ಲಿಪ್ ಟಚ್ ಸ್ಕ್ರೀನ್ ಮತ್ತು ನಾನ್-ಫ್ಲಿಪ್ ಮಾದರಿಗಳಲ್ಲಿ 14-ಇಂಚಿನ ಮತ್ತು 15-ಇಂಚಿನ ಸ್ಕ್ರೀನ್ ಹೊಂದಿದ ಪ್ರಕಾಶಮಾನವಾದ, ಸ್ಪಷ್ಟವಾದ ಪೂರ್ಣ-ಎಚ್ ಡಿ ಡಿಸ್ ಪ್ಲೇ ಇವುಗಳಲ್ಲಿದ್ದು, ಆಸೂಸ್ ಕ್ರೋಮ್ ಬುಕ್ ಸಿಎಕ್ಸ್ 1 ಸರಣಿಯು ಶಕ್ತಿಶಾಲಿ ಪ್ರೊಸೆಸರ್ ನಿಂದ ಚಾಲಿತವಾಗಿದೆ. ಜೊತೆಗೆ ಸೂಪರ್ ಫಾಸ್ಟ್ LPDDR4X 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿವೆ.
ಈ ಲ್ಯಾಪ್ಟಾಪ್ಗಳು 720p HD ಕ್ಯಾಮರಾದೊಂದಿಗೆ ವೈಡ್-ವ್ಯೂ ತಂತ್ರಜ್ಞಾನ ಮತ್ತು ಟಚ್ ಸ್ಕ್ರೀನ್, ಸುಸ್ಪಷ್ಟವಾದ ಸ್ಟಿರಿಯೊ ಆಡಿಯೋ ಜೊತೆಗೆ ಫುಲ್-ಎಚ್ಡಿ ಡಿಸ್ ಪ್ಲೇ ಅನುಭವ ನೀಡುತ್ತವೆ. ಈ ಸಾಧನಗಳು ಗೂಗಲ್ ವರ್ಕ್ಸ್ಪೇಸ್, ಜೊತೆಗೆ ಗೂಗಲ್ ಪ್ಲೇ ಸ್ಟೋರ್ ಆಂಡ್ರಾಯ್ಡ್ ಅಪ್ಲಿಕೇಶನ್ಗಳು, ಗೂಗಲ್ ಅಸಿಸ್ಟೆಂಟ್ ಮತ್ತು 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ಸೌಲಭ್ಯಗಳನ್ನು ಹೊಂದಿವೆ.
1989 ರಲ್ಲಿ ಸ್ಥಾಪನೆಯಾದ ಆಸೂಸ್ ವಿಶ್ವದ ಅತ್ಯುತ್ತಮ ಮದರ್ ಬೋರ್ಡ್ಗಳು ಮತ್ತು ಉತ್ತಮ-ಗುಣಮಟ್ಟದ ಪರ್ಸನಲ್ ಕಂಪ್ಯೂಟರ್ಗಳು, ಮಾನಿಟರ್ಗಳು, ಗ್ರಾಫಿಕ್ಸ್ ಕಾರ್ಡ್ಗಳು, ರೂಟರ್ಗಳು ಮತ್ತು ಇತರ ತಂತ್ರಜ್ಞಾನ ಸಾಧನಗಳಿಗೆ ಹೆಸರುವಾಸಿಯಾದ ಬಹುರಾಷ್ಟ್ರೀಯ ಕಂಪನಿಯಾಗಿದೆ. ಇಂದು, ಆಸೂಸ್ ಮುಂದಿನ ಪೀಳಿಗೆಯ ಸ್ಮಾರ್ಟ್ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುತ್ತಿದೆ ಮತ್ತು ನಿರ್ಮಿಸುತ್ತಿದೆ.
ಕಂಪನಿ ಆರಂಭವಾದ ಆರು ವರ್ಷಗಳ ನಂತರ 1995 ರಲ್ಲಿ ಆಸೂಸ್ ವಿಶ್ವದ ಪ್ರಮುಖ ಮದರ್ ಬೋರ್ಡ್ ತಯಾರಕ ಕಂಪನಿಯಾಯಿತು. 2008 ರಲ್ಲಿ ಆಸೂಸ್ ತನ್ನ ಮೂಲ ಕಂಪನಿಯನ್ನು ಮೂರು ಸ್ವತಂತ್ರ ಕಂಪನಿಗಳಾಗಿ ವಿಭಜಿಸುವ ಮೂಲಕ ಕಾರ್ಯಾಚರಣೆಗಳನ್ನು ಪುನರ್ ರಚಿಸಿತು. ಆಸೂಸ್ ನ ಮೊದಲ ತಲೆಮಾರಿನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಸ್ಮಾರ್ಟ್ ಫೋನ್ಗಳನ್ನು 2014 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಸ್ಮಾರ್ಟ್ಫೋನ್ಗಳು ಇಂಟೆಲ್ ಪ್ರೊಸೆಸರ್ಗಳಿಂದ ನಿಯಂತ್ರಿಸಲ್ಪಡುತ್ತವೆ. ಇತರ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಎಆರ್ಎಂ ಪ್ರೊಸೆಸರ್ಗಳನ್ನು ಹೊಂದಿರುತ್ತವೆ.
ಇದನ್ನೂ ಓದಿ : ಆಗಸ್ಟ್ ಜಿಎಸ್ಟಿ ಆದಾಯ 1,59,069 ಕೋಟಿ ರೂ.; ಕಳೆದ ವರ್ಷಕ್ಕಿಂತ ಶೇ 11ರಷ್ಟು ಹೆಚ್ಚಳ