ಬಾಹ್ಯಾಕಾಶ ವಿಜ್ಞಾನ ಅತ್ಯಂತ ಸೂಜಿಗ. ಅದು ಸಾಮಾನ್ಯ ಜನರಿಗೆ ಮಾತ್ರವಲ್ಲ, ವಿಜ್ಞಾನಿಗಳಿಗೂ ಕುತೂಹಲದ ಕಣಜ. ಕ್ಷಣಕ್ಕೊಂದು ಅಪರೂಪದ ವಿದ್ಯಮಾನ ಆಕಾಶದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಭೂಮಿಯಲ್ಲಿನ ಜನರಿಗೆ ಅಥವಾ ವಿಜ್ಞಾನಿಗಳಿಗೆ ಗೊತ್ತಾಗುವುದು ಅಪರೂಪದಲ್ಲಿ ಅಪರೂಪವೇ ಸರಿ.
ಈಗ ಅಂಥದ್ದೊಂದು ಅತ್ಯಪರೂಪದ ವಿದ್ಯಮಾನ ಕಣ್ಣಿಗೆ ಬಿದ್ದಿದೆ. ಬೃಹತ್ ನಕ್ಷತ್ರವೊಂದು ಸ್ಫೋಟಗೊಳ್ಳುವುದನ್ನು ಟೆಲಿಸ್ಕೋಪ್ಗಳ ಮೂಲಕ ನೋಡಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ನಕ್ಷತ್ರ ಸ್ಫೋಟಗೊಳ್ಳುವುದೆಂದರೆ ಅದು ಸಾವನ್ನಪ್ಪುವುದು ಎಂದರ್ಥ. ಮೇಲ್ನೋಟಕ್ಕೆ ಇದು ಸಾಮಾನ್ಯ ಎಂದು ನಾವು ಅಂದುಕೊಳ್ಳಬಹುದು. ಆಗಸದಲ್ಲಿ ಸಾಕಷ್ಟು ನಕ್ಷತ್ರಗಳಿವೆ. ಅವುಗಳು ಸ್ಫೋಟಗೊಳ್ಳುವುದು ಅತ್ಯಂತ ಸರ್ವೇ ಸಾಮಾನ್ಯ ಎಂದೆನಿಸಬಹುದು.
ಈ ಕುರಿತು ನಿಮ್ಮ ಕುತೂಹಲ ಹೆಚ್ಚಾಗಬೇಕೆಂದರೆ ಒಂದು ನಕ್ಷತ್ರದ ಆಯಸ್ಸು ಎಷ್ಟು ಎಂದು ತಿಳಿದುಕೊಂಡರೆ ಸಾಕು. ಹೌದು, ಕೆಲವೊಂದು ನಕ್ಷತ್ರಗಳು 1 ಬಿಲಿಯನ್ ವರ್ಷಗಳಷ್ಟು ಬದುಕಿದರೆ, ಇನ್ನೂ ಕೆಲವು ನಕ್ಷತ್ರಗಳು 10 ಬಿಲಿಯನ್ ವರ್ಷಗಳಷ್ಟು ಬದುಕಿರುತ್ತವೆ. ಇನ್ನೂ ಕೆಲವು 13.8 ಬಿಲಿಯನ್ ವರ್ಷಗಳು ಬದುಕುತ್ತವೆ ಎಂಬುದು ವಿಜ್ಞಾನಿಗಳ ಅಂದಾಜು.
ಅಂದರೆ ಈಗ ಕೆಲವು ಮಿಲಿಯನ್ ವರ್ಷಗಳ ಕಾಲ ಜೀವಿಸಿದ್ದ ನಕ್ಷತ್ರ ಸಾವನ್ನಪ್ಪುತ್ತಿದೆ ಅರ್ಥಾತ್ ಸ್ಫೋಟಗೊಳ್ಳುತ್ತಿದೆ. ಆ ಸ್ಫೋಟವನ್ನು ಭೂಮಿಯ ಮೇಲಿರುವ ಟೆಲಿಸ್ಕೋಪ್ಗಳಿಂದ ನೋಡಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಸ್ಫೋಟಗೊಂಡ ನಕ್ಷತ್ರ ಇರುವ ದೂರವೆಷ್ಟು ಗೊತ್ತಾ?
ವಿಜ್ಞಾನಿಗಳು ಹೇಳುವಂತೆ, ಈಗ ಸ್ಫೋಟಗೊಂಡಿರುವ ಎನ್ಜಿಸಿ 5731(NGC 5731) ಎಂಬ ಹೆಸರಿನ ಗೆಲಾಕ್ಸಿಯಲ್ಲಿದೆ. ಈ ಗೆಲಾಕ್ಸಿ ಇರುವುದು ಭೂಮಿಯಿಂದ ಸುಮಾರು 120 ಮಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.