ಕೇಪ್ ಕೆನವೆರಲ್:ಎರಡನೇ ಬಾರಿಗೆ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧತೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ನಾಲ್ವರು ಗಗನಯಾತ್ರಿಗಳಿಗೆ ತಾವು ಹಾರಾಟ ನಡೆಸಲಿರುವ ನೌಕೆಯನ್ನು ಪರಿಚಯಿಸಿತು. ಮುಂದಿನ ವರ್ಷ ನಾಸಾ ಈ ನಾಲ್ವರು ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಲು ಉದ್ದೇಶಿಸಿದೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ.
ಕೆನಡಾ ಬಾಹ್ಯಾಕಾಶ ಕೇಂದ್ರದಲ್ಲಿರುವ ಆರ್ಟಿಮಸ್-2 ಯೋಜನೆಯ ಭಾಗವಾಗಿರುವ ಸ್ಪೇಸ್ಕ್ರಾಫ್ಟ್ ಅನ್ನು ಗಗನಯಾನಿಗಳು ವೀಕ್ಷಿಸಿದರು. ಈ ವೇಳೆ ಗಗನಯಾನಿಗಳಲ್ಲಿ ಒಬ್ಬರಾದ ಕ್ರಿಸ್ಟಿನಾ ಕೋಚ್ ಅವರು ತಮ್ಮ ಅನುಭವವನ್ನು ಹಂಚಿಕೊಂಡು, ರಾಕೆಟ್ ಕಂಡ ಬಳಿಕ ನನಗೆ ಬೇರೇನೂ ಕಾಣುತ್ತಿಲ್ಲ. ಅದನ್ನು ನೋಡಿದರೇ ಮೈಯೆಲ್ಲಾ ನಡುಕ ಉಂಟಾಗುತ್ತದೆ ಎಂದು ಹೇಳಿದರು.
ರಾಕೆಟ್ಗೆ ಶಾಖ ತಡೆಯುವ ಕವಚ:ಕಳೆದ ವಾರ ಮಾನವ ರಹಿತ ಗಗನಯಾನ ಕೈಗೊಂಡ ವೇಳೆ ಹೆಚ್ಚಿನ ಶಾಖದಿಂದ ರಾಕೆಟ್ ಹಾನಿಗೀಡಾಗಿತ್ತು. ಈ ಬಾರಿ ಮಾನವ ಸಹಿತ ಯಾನವಾಗಿರುವುದರಿಂದ ರಾಕೆಟ್ಗೆ ಹೆಚ್ಚಿನ ಭದ್ರತೆ ನೀಡಲು ವಿಜ್ಞಾನಿಗಳು ಶ್ರಮಿಸುತ್ತಿದ್ದು, ತೀವ್ರ ಶಾಖ ತಡೆಯುವ ಹೀಟ್ ಶೀಲ್ಡ್ ಕ್ಯಾಪ್ಸುಲ್ ಅನ್ನು ಸಿದ್ಧಪಡಿಸಲಾಗುತ್ತಿದೆ.
ಚಂದ್ರನ ಸುತ್ತ ನಾಲ್ವರಿಂದ ಅಧ್ಯಯನ:1972 ರಲ್ಲಿ ಅಪೋಲೋ-17 ಯೋಜನೆ ಮೂಲಕ ಇಬ್ಬರು ಗಗನಯಾನಿಗಳನ್ನು ಚಂದ್ರನಲ್ಲಿಗೆ ಕಳುಹಿಸಿ ಅಧ್ಯಯನ ನಡೆಸಿದ್ದ ನಾಸಾ ಇದೀಗ 50 ವರ್ಷಗಳ ಬಳಿಕ ಮತ್ತೆ ಮಾನವ ಸಹಿತ ಗಗನಯಾನಕ್ಕೆ ಸಜ್ಜಾಗಿದೆ. ಇದಕ್ಕೆ ಆರ್ಟಿಮಸ್-2 ಯೋಜನೆ ಎಂದು ಹೆಸರಿಡಲಾಗಿದ್ದು, ಮಹತ್ವಾಕಾಂಕ್ಷಿ ಯೋಜನೆಗೆ ನಾಲ್ವರು ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದೆ.
ಮಹಿಳೆ, ಕಪ್ಪು ವರ್ಣೀಯ ಇದೇ ಮೊದಲು:ಮಹತ್ವಾಕಾಂಕ್ಷಿಯ ಆರ್ಟಿಮಸ್ -2 ಯೋಜನೆಗೆ ಮೊದಲ ಬಾರಿಗೆ ಮಹಿಳೆ ಮತ್ತು ಕಪ್ಪುವರ್ಣೀಯ ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದೆ. ನಾಲ್ವರು ಗಗನಮಾತ್ರಿಗಳು ಚಂದ್ರನ ಸುತ್ತ ಹಾರಾಟ ನಡೆಸಿ ಅಧ್ಯಯನ ಮಾಡಲಿದ್ದಾರೆ.
ಕ್ರಿಸ್ಟಿನಾ ಕೋಚ್(ಮೊದಲ ಮಹಿಳೆ), ವಿಕ್ಟರ್ ಗ್ಲೋವರ್ (ಮೊದಲ ಕಪ್ಪು ವರ್ಣೀಯ), ಜೆರಮಿ ಹ್ಯಾನ್ಸನ್(ಮೊದಲ ಕೆನಡಿಯನ್) ಹಾಗೂ ರೀಡ್ ವೈಸ್ಮನ್ರನ್ನು ನಾಸಾ ಚಂದ್ರನ ಅಧ್ಯಯನ ನಡೆಸುವ ನಾಲ್ವರು ಗಗನಯಾತ್ರಿಗಳಾಗಿದ್ದಾರೆ. ರೀಡ್ ವೈಸ್‌ಮನ್ ಅವರು ಬಾಹ್ಯಾಕಾಶ ಯಾನದಲ್ಲಿ ನಿಪುಣರಾಗಿದ್ದು, ಅವರನ್ನು ಮಿಷನ್ ಕಮಾಂಡರ್ ಆಗಿ ನಾಸಾ ಹಾಗೂ ಕೆನಡಾದ ಬಾಹ್ಯಾಕಾಶ ಸಂಸ್ಥೆ ಆಯ್ಕೆ ಮಾಡಿದೆ.
ಇದನ್ನೂ ಓದಿ:Chandrayaan-3: ಚಂದ್ರನ ಗುರುತ್ವದತ್ತ ಚಂದ್ರಯಾನ-3 ನೌಕೆ, ಆಗಸ್ಟ್ 23 ರ ಲ್ಯಾಂಡಿಂಗ್ನದ್ದೇ ಕೌತುಕ