ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ) : ಐಪೋನ್ ತಯಾರಿಸುವ ಆ್ಯಪಲ್ ಕಂಪನಿ ಈಗ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಸದ್ಯ ಆ್ಯಪಲ್ ಅಮೆರಿಕದಲ್ಲಿ ಉಳಿತಾಯ ಠೇವಣಿ ಖಾತೆ ಯೋಜನೆಯನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬಡ್ಡಿದರ ನೀಡುವ ಉಳಿತಾಯ ಯೋಜನೆ ಎಂದೇ ಜನಪ್ರಿಯವಾಗಿರುವ ಆ್ಯಪಲ್ ಸೇವಿಂಗ್ಸ್ ಅಕೌಂಟ್ ಯೋಜನೆ ಆರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಸುಮಾರು 1 ಶತಕೋಟಿ ಡಾಲರ್ ಠೇವಣಿಗಳನ್ನು ಸಂಗ್ರಹಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಅನೇಕ ಬ್ಯಾಂಕ್ಗಳು ದಿವಾಳಿಯಾಗಿ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುತ್ತಿರುವ ಮಧ್ಯೆ ಆ್ಯಪಲ್ ಉಳಿತಾಯ ಯೋಜನೆ ಗ್ರಾಹಕರ ವಿಶ್ವಾಸ ಗಳಿಸುತ್ತಿದೆ.
ಯೋಜನೆ ಆರಂಭವಾದ ವಾರದ ಅಂತ್ಯದ ವೇಳೆಗೆ ಸರಿಸುಮಾರು 2,40,000 ಖಾತೆಗಳನ್ನು ತೆರೆಯಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಆ್ಯಪಲ್ನ ಉಳಿತಾಯ ಖಾತೆ ಯೋಜನೆಯು ಗೋಲ್ಡ್‌ಮನ್ ಸ್ಯಾಕ್ಸ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದೆ. ಆದಾಗ್ಯೂ ಈವರೆಗೂ ಎಷ್ಟು ಡಿಪಾಸಿಟ್ ಬಂದಿದೆ ಹಾಗೂ ಎಷ್ಟು ಖಾತೆಗಳನ್ನು ತೆರೆಯಲಾಗಿದೆ ಎಂಬ ಬಗ್ಗೆ ಆ್ಯಪಲ್ ಅಥವಾ ಗೋಲ್ಡ್‌ಮನ್ ಸ್ಯಾಕ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಶ್ವದ ಬೃಹತ್ ತಂತ್ರಜ್ಞಾನ ಕಂಪನಿಗಳಲ್ಲೊಂದಾಗಿರುವ ಆ್ಯಪಲ್, ತನ್ನ ಆ್ಯಪಲ್ ಕಾರ್ಡ್ ಗ್ರಾಹಕರಿಗಾಗಿ ವಾರ್ಷಿಕ ಶೇ 4.15 ರಷ್ಟು ಬಡ್ಡಿದರ ನೀಡುವ ಉಳಿತಾಯ ಖಾತೆ ಯೋಜನೆ ಆರಂಭಿಸಿತ್ತು. "ಆ್ಯಪಲ್ ಕಾರ್ಡ್ ಬಳಕೆದಾರರು ಗೋಲ್ಡ್‌ಮನ್ ಸ್ಯಾಕ್ಸ್ನ ಉಳಿತಾಯ ಖಾತೆಯೊಂದಿಗೆ ದೈನಂದಿನ ನಗದು ಬಹುಮಾನಗಳನ್ನು ಪಡೆಯಬಹುದು. ಇದು 4.15 ಶೇಕಡಾ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಇದು ರಾಷ್ಟ್ರೀಯ ಸರಾಸರಿಗಿಂತ 10 ಪಟ್ಟು ಹೆಚ್ಚು" ಎಂದು ಕಂಪನಿ ಹೇಳಿದೆ.