ಹೈದರಾಬಾದ್: ಐಫೋನ್ 15 ಸರಣಿಯ ಸ್ಮಾರ್ಟ್ಫೋನ್ಗಳು ಅತಿಯಾಗಿ ಬಿಸಿಯಾಗುತ್ತಿರುವುದನ್ನು ತಡೆಗಟ್ಟಲು ಆ್ಯಪಲ್ ಹೊಸ iOS 17 ಅಪ್ಡೇಟ್ ಬಿಡುಗಡೆ ಮಾಡಿದೆ. ಹೊಸ ಅಪ್ಡೇಟ್ iOS 17.0.3 ಐಫೋನ್ 15 ಅತಿಯಾಗಿ ಬಿಸಿಯಾಗುವ ಸಮಸ್ಯೆಗೆ ಪರಿಹಾರ ನೀಡಲಿದೆ. "ಹೊಸ ಅಪ್ಡೇಟ್ ಪ್ರಮುಖ ಬಗ್ ಫಿಕ್ಸಿಂಗ್ ಮತ್ತು ಭದ್ರತಾ ನವೀಕರಣಗಳನ್ನು ಒದಗಿಸುತ್ತದೆ" ಎಂದು ಟೆಕ್ ದೈತ್ಯ ಆ್ಯಪಲ್ ಹೇಳಿದೆ.
ಕೆಲ ಬಳಕೆದಾರರು ತಮ್ಮ ಐಫೋನ್ಗಳು ಅತಿಯಾಗಿ ಬಿಸಿಯಾಗುತ್ತಿರುವ ಬಗ್ಗೆ ದೂರು ನೀಡಿದ್ದರು. ಆದಾಗ್ಯೂ, ಎಷ್ಟು ಬಳಕೆದಾರರಿಗೆ ಈ ಸಮಸ್ಯೆಯಾಗಿದೆ ಎಂಬುದು ಸ್ಪಷ್ಟವಾಗಿಲ್ಲ. iOS 17 ಸಾಫ್ಟ್‌ವೇರ್ ಮತ್ತು ಇನ್ಸ್ಟಾಗ್ರಾಮ್ನಂಥ ಕೆಲ ಥರ್ಡ್-ಪಾರ್ಟಿ ಅಪ್ಲಿಕೇಶನ್ಗಳಲ್ಲಿನ ದೋಷ ಸೇರಿದಂತೆ ಹೊಸ ಐಫೋನ್ಗಳು ನಿರೀಕ್ಷೆಗಿಂತ ಹೆಚ್ಚು ಬಿಸಿಯಾಗಲು ಕಾರಣವಾಗುವ ಕೆಲ ಸಮಸ್ಯೆಗಳನ್ನು ಆ್ಯಪಲ್ ಗುರುತಿಸಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.
ಹೆಚ್ಚುವರಿಯಾಗಿ, ಇತ್ತೀಚಿನ ಅಪ್ಡೇಟ್ ಎರಡು ಸೆಕ್ಯೂರಿಟಿ ಫಿಕ್ಸ್ಗಳನ್ನು ಒಳಗೊಂಡಿದೆ. ಇದರಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಲಾದ ದೋಷದ ಪರಿಹಾರವೂ ಸೇರಿದೆ. "ಸುಧಾರಿತ ತಪಾಸಣೆಯೊಂದಿಗೆ ಸಮಸ್ಯೆಯನ್ನು ಪರಿಹರಿಸಲಾಗಿದೆ" ಎಂದು ಆ್ಯಪಲ್ ತಿಳಿಸಿದೆ. iOS 17.0.3 ಮತ್ತು iPadOS 17.0.3 ಈಗ iOS 17 ಮತ್ತು iPadOS 17 ಗೆ ಹೊಂದಿಕೆಯಾಗುವ ಐಫೋನ್ ಮತ್ತು ಐಪ್ಯಾಡ್ ಮಾದರಿಗಳಿಗೆ ಲಭ್ಯವಿದೆ. 420 ಎಂಬಿ ಗಾತ್ರದ ಅಪ್ಡೇಟ್ ಅನ್ನು ಈಗ ಐಫೋನ್ ಬಳಕೆದಾರರು ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.