ವಾಷಿಂಗ್ಟನ್: ಚೀನಾದಲ್ಲಿ ಕೊರೊನಾ ಕೇಸ್ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ ಜನರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ಕೊರೊನಾ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಅನುಸರಿಸುತ್ತಿದ್ದು, ದೇಶದೆಲ್ಲೆಡೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಹೀಗಾಗಿ ಉತ್ಪಾದನೆಗಳಲ್ಲಿ ಕುಸಿತ ಕಂಡಿದ್ದು, ಆ್ಯಪಲ್ ಕಂಪನಿಯು ತನ್ನ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗೆ ವರ್ಗಾಯಿಸಲು ನಿರ್ಧರಿಸಿದೆ.
ಈ ಹಿಂದೆ ಚೀನಾದ ಐಫೋನ್ ಉತ್ಪಾದನಾ ಘಟಕಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಆ್ಯಪಲ್ ಕಂಪನಿಯು ತನ್ನ ಕೆಲವು ಉತ್ಪಾದನೆಗಳನ್ನು ಚೀನಾದಿಂದ ಹೊರತರುವ ಕೆಲಸಕ್ಕೆ ಮುಂದಾಗಿದೆ. ಚೀನಾದ ಝೆಂಗ್‌ಝೌನಲ್ಲಿರುವ ಐಫೋನ್ ಮೊಬೈಲ್ ಉತ್ಪಾದನಾ ಘಟಕದಲ್ಲಿ 3 ಲಕ್ಷ ಕಾರ್ಮಿಕರು ಮೊಬೈಲ್ ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟಕದಲ್ಲಿ ಶೇಕಡ 85ರಷ್ಟು ಉತ್ಪಾದನೆ ನಡೆಯುತ್ತಿತ್ತು.