ನವದೆಹಲಿ: ಆ್ಯಪಲ್ 2023ರಲ್ಲಿ ಮೊದಲ ಬಾರಿಗೆ ಜಾಗತಿಕ ಸ್ಮಾರ್ಟ್ಫೋನ್ ಉದ್ಯಮದ ದಿಗ್ಗಜನಾಗಿ ಹೊರಹೊಮ್ಮಿದೆ. ಆ್ಯಪಲ್ ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಶೇಕಡಾ 20.1ರಷ್ಟು ಪಾಲು ಹೊಂದುವ ಮೂಲಕ ವಿಶ್ವದ ನಂಬರ್ 1 ಸ್ಥಾನಕ್ಕೇರಿದೆ ಎಂದು ಹೊಸ ವರದಿಯೊಂದು ಮಂಗಳವಾರ ತಿಳಿಸಿದೆ. ಕಳೆದ ಹಲವಾರು ವರ್ಷಗಳಿಂದ ಜಾಗತಿಕ ಸ್ಮಾರ್ಟ್ಪೋನ್ ಮಾರಾಟದಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಸ್ಯಾಮ್ಸಂಗ್ ಶೇ.19.5ರಷ್ಟು ಮಾರುಕಟ್ಟೆ ಪಾಲು ಹೊಂದುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದೆ.
ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ವರದಿಯ ಪ್ರಕಾರ, ಜಾಗತಿಕ ಸ್ಮಾರ್ಟ್ಫೋನ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.3.2ರಷ್ಟು ಕುಸಿದು 2023ರಲ್ಲಿ 1.17 ಬಿಲಿಯನ್ ಯುನಿಟ್ಗಳಿಗೆ ತಲುಪಿದೆ.
"ಮುಂಚೂಣಿ 3 ಸ್ಮಾರ್ಟ್ಪೋನ್ ಕಂಪನಿಗಳ ಪಟ್ಟಿಯಲ್ಲಿ ವಾರ್ಷಿಕವಾಗಿ ಸಕಾರಾತ್ಮಕ ಬೆಳವಣಿಗೆ ಹೊಂದಿರುವ ಏಕೈಕ ಕಂಪನಿ ಆ್ಯಪಲ್ ಆಗಿದ್ದು, ಇದೇ ಮೊದಲ ಬಾರಿಗೆ ವಾರ್ಷಿಕವಾಗಿ ನಂಬರ್ 1 ಸ್ಥಾನ ಪಡೆದಿದೆ" ಎಂದು ಐಡಿಸಿಯ ವರ್ಲ್ಡ್ ವೈಡ್ ಟ್ರ್ಯಾಕರ್ ತಂಡದ ಸಂಶೋಧನಾ ನಿರ್ದೇಶಕಿ ನಬಿಲಾ ಪೊಪಾಲ್ ಹೇಳಿದರು.
ಹೆಚ್ಚಾದ ಕಾನೂನಾತ್ಮಕ ಸವಾಲುಗಳು ಮತ್ತು ತನ್ನ ಅತಿದೊಡ್ಡ ಮಾರುಕಟ್ಟೆಯಾದ ಚೀನಾದಲ್ಲಿ ಹುವಾವೇಯಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದರೂ ಆ್ಯಪಲ್ ಈ ಸಾಧನೆ ಮಾಡಿದೆ.
ಚೀನಾದಲ್ಲಿ ಐಫೋನ್ ಬೆಲೆ ಕಡಿತ: ಆ್ಯಪಲ್ ಚೀನಾದಲ್ಲಿ ತನ್ನ ಇತ್ತೀಚಿನ ಐಫೋನ್ಗಳ ಖರೀದಿಯ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ನೀಡುತ್ತಿದೆ. ಆ್ಯಪಲ್ ಈ ರೀತಿ ರಿಯಾಯಿತಿ ನೀಡುವುದು ತುಂಬಾ ಅಪರೂಪ. ತನ್ನ ಅಧಿಕೃತ ಚೀನೀ ವೆಬ್ಸೈಟ್ನಲ್ಲಿ ಗ್ರಾಹಕರು ಐಫೋನ್ 15 ಮಾದರಿಗಳನ್ನು ಸುಮಾರು ಶೇ.5ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದು ಎಂದು ಆ್ಯಪಲ್ ಸದ್ದಿಲ್ಲದೆ ಬಹಿರಂಗಪಡಿಸಿದೆ. ಈ ರಿಯಾಯಿತಿಯು ಚಾಂದ್ರಮಾನ ಹೊಸ ವರ್ಷದ ಶಾಪಿಂಗ್ ಋತು ಪ್ರಾರಂಭವಾಗುವ ಮೊದಲು ಜನವರಿ 18ರಿಂದ ಜನವರಿ 21ರವರೆಗೆ ಇರಲಿದೆ.
ಹೊಸ ಐಫೋನ್ ಮಾದರಿಗಳ ಬೆಲೆಯನ್ನು ಆ್ಯಪಲ್ ಕಡಿತಗೊಳಿಸಿರುವುದು ಕಳೆದ ಹಲವಾರು ವರ್ಷಗಳಲ್ಲಿ ಇದೇ ಮೊದಲ ಸಲವಾಗಿದೆ. ಇದಲ್ಲದೆ ಚೀನಾದಲ್ಲಿ ಆ್ಯಪಲ್ ತನ್ನ ಹೊಸ ಐಫೋನ್ 15ರ ಬೆಲೆಗಳನ್ನು ಕೂಡ ಹೆಚ್ಚಿಸಿಲ್ಲ. ಆದಷ್ಟು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ಆ್ಯಪಲ್ ರಿಯಾಯಿತಿಗಳನ್ನು ನೀಡುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಆ್ಯಪಲ್ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕಂಪನಿಯಾದ ಮೈಕ್ರೊಸಾಫ್ಟ್