ಬೆಂಗಳೂರು: ಮಾನವನಂತೆಯೇ ಪ್ರತಿಕ್ರಿಯೆ ನೀಡುವ ಜನರೇಟಿವ್ ಎಐ ಚಾಟ್ಬಾಟ್ ಚಾಟ್ ಜಿಪಿಟಿ ಆರಂಭವಾದ ನಂತರ ಆ್ಯಪಲ್ ಕೂಡ ಇದೇ ರೀತಿಯ ಆರ್ಟಿಫಿಶಿಯಲ್ ತಂತ್ರಜ್ಞಾನವನ್ನು ತಯಾರಿಸಲಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಜೋರಾಗಿದ್ದವು. ಸದ್ಯ ಆ್ಯಪಲ್ ಸಿಇಓ ಟಿಮ್ ಕುಕ್ ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ. ಜೆನ್ ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಆ್ಯಪಲ್ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದೆ ಮತ್ತು ಇದನ್ನು ಮುಂದುವರಿಸಲಿದೆ ಎಂದು ಆಗಸ್ಟ್ನಲ್ಲಿ ಕುಕ್ ಹೇಳಿದ್ದಾರೆ.
ಇತ್ತೀಚೆಗೆ ಹೂಡಿಕೆದಾರರೊಂದಿಗೆ ನಡೆದ ಸಭೆಯಲ್ಲಿ ಆ್ಯಪಲ್ ನಿಜವಾಗಿಯೂ ಜನರೇಟಿವ್ ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಮತ್ತು ಕಂಪನಿಯು ಈ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿರುವಂತೆ ತಯಾರಿಸಲಿದೆ ಎಂದು ಕುಕ್ ಹೇಳಿದ್ದಾರೆ.
"ಜನರೇಟಿವ್ ಎಐ ವಿಷಯದಲ್ಲಿ ನಿಸ್ಸಂಶಯವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಅದು ಹೇಗಿರಲಿದೆ ಎಂಬ ಬಗ್ಗೆ ಈಗಲೇ ಹೆಚ್ಚಿನ ವಿಷಯ ಬಹಿರಂಗಪಡಿಸಲಾರೆ. ನಾವು ಆ ರೀತಿ ಮಾಹಿತಿಗಳನ್ನು ಬಹಿರಂಗಪಡಿಸುವುದಿಲ್ಲ ಎಂಬುದು ಬಹುಶಃ ನಿಮಗೆಲ್ಲ ತಿಳಿದೇ ಇದೆ. ಆದರೆ ನಾವು ಈ ವಿಚಾರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದು ಮಾತ್ರ ಖಚಿತ. ಕಾಲಾಂತರದಲ್ಲಿ ನೀವು ಉತ್ಪನ್ನಗಳ ಪ್ರಗತಿಯನ್ನು ಕಾಣುವಿರಿ" ಎಂದು ಟಿಮ್ ಕುಕ್ ಹೇಳಿದರು.