ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ 50 ಮಿಲಿಯನ್ ಐಫೋನ್ ಉತ್ಪಾದನೆ ಗುರಿಯನ್ನು ಆ್ಯಪಲ್ ಹೊಂದಿದೆ. ಇದರ ಜೊತೆಗೆ, ಚೀನಾದ ಹೊರಗೂ ಕೆಲವು ಉತ್ಪಾದನೆಗಳನ್ನು ಸ್ಥಳಾಂತರಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದು ವರದಿ ತಿಳಿಸಿದೆ. ಮುಂದಿನ ಮೂರು ಮತ್ತು ನಾಲ್ಕು ವರ್ಷದಲ್ಲಿ ಘಟಕಗಳಲ್ಲಿ ಮಿಲಿಯನ್‌ಗಟ್ಟಲೆ ಫೋನ್ ತಯಾರಿಸುವ ಗುರಿಯನ್ನು ಟೆಕ್ ದೈತ್ಯ ಸಂಸ್ಥೆ ಹೊಂದಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆ್ಯಪಲ್ ಈ ಗುರಿಯನ್ನು ಸಾಧಿಸಿದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದಿಂದಲೇ ಕಾಲು ಭಾಗದಷ್ಟು ಐಫೋನ್ ಉತ್ಪಾದನೆ ಆಗಲಿದೆ. ಚೀನಾ ಐಫೋನ್ ಉತ್ಪಾದನೆಯ ದೊಡ್ಡ ದೇಶವಾಗಿಯೇ ಉಳಿಯಲಿದೆ.
ಚೀನಾದ ಹೊರಗೆ ತನ್ನ ಉತ್ಪಾದನೆಯನ್ನು ಸ್ಥಳಾಂತರ ಮಾಡಲು ಆ್ಯಪಲ್ ಯೋಜನೆ ಹೊಂದಿದ್ದರೂ ಇದಕ್ಕೆ ದೊಡ್ಡ ಮಟ್ಟದ ಹೋರಾಟ ಎದುರಿಸುತ್ತಿದೆ. ಆ್ಯಪಲ್ನ ಪ್ರಮುಖ ಪೂರೈಕೆದಾರ ಫಾಕ್ಸ್ಕಾನ್ ಭಾರತದಲ್ಲಿ ಹೆಚ್ಚಿನ ಫ್ಯಾಕ್ಟರಿಯನ್ನು ತೆರೆಯಲು ಯೋಜನೆ ರೂಪಿಸಿದೆ. ಟಾಟಾ ಗ್ರೂಪ್ ಇದಕ್ಕಾಗಿ ಭಾರತದಲ್ಲಿ ಅತಿದೊಡ್ಡ ಐಫೋನ್ ಸ್ಥಾವರ ರೂಪಿಸಲು ಸಜ್ಜಾಗಿದೆ ಎಂದು ವರದಿ ತಿಳಿಸಿದೆ.
ಭಾರತ ಪ್ರಸ್ತುತ ಆರ್ಥಿಕ ವರ್ಷದಲ್ಲಿ, ಏಪ್ರಿಲ್, ಆಗಸ್ಟ್ ಅವಧಿಯಲ್ಲಿ 5.5 ಬಿಲಿಯನ್ ಡಾಲರ್ ಐಫೋನ್ ರಫ್ತು ಕಾಣುತ್ತಿದೆ ಎಂದು ಸರ್ಕಾರ ಮತ್ತು ಉದ್ಯಮದ ದತ್ತಾಂಶ ತಿಳಿಸಿದೆ. ಐಸಿಇಎ ಅಂದಾಜಿಸಿದಂತೆ, 2022-23ರ ಆರ್ಥಿಕ ವರ್ಷದಲ್ಲಿ ಅವಧಿಯಲ್ಲಿ ಭಾರತದ ಮೊಬೈಲ್ ರಫ್ತು 25 ಸಾವಿರ ಕೋಟಿ ನಡೆಸಿದರೆ, 2023-24ರಲ್ಲಿ 45 ಸಾವಿರ ಕೋಟಿ ರಫ್ತು ನಡೆಸಿದೆ.