ನವದೆಹಲಿ : ಆಂಡ್ರಾಯ್ಡ್ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿದ 1,337.76 ಕೋಟಿ ರೂ.ಗಳ ಸಂಪೂರ್ಣ ದಂಡವನ್ನು ಗೂಗಲ್ ಭಾರತ ಸರ್ಕಾರಕ್ಕೆ ಪಾವತಿಸಿದೆ. ಭಾರತದಲ್ಲಿನ ಡಿಜಿಟಲ್ ಕಾನೂನುಗಳ ಉಲ್ಲಂಘನೆಗಾಗಿ ಬೃಹತ್ ತಂತ್ರಜ್ಞಾನ ಕಂಪನಿಯೊಂದು ಇಷ್ಟೊಂದು ದೊಡ್ಡ ಮೊತ್ತದ ದಂಡ ಪಾವತಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ತನ್ನ ಆದೇಶದಲ್ಲಿ ನೀಡಿದ 30 ದಿನಗಳ ಗಡುವಿನೊಳಗೆ ಸಂಪೂರ್ಣ ದಂಡದ ಮೊತ್ತವನ್ನು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ ಖಾತೆಗೆ ಠೇವಣಿ ಮಾಡಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ಮಂಗಳವಾರ ತಿಳಿಸಿವೆ.
ಭಾರತೀಯ ಮಾರುಕಟ್ಟೆ ನಿಯಂತ್ರಕ ಸಿಸಿಐ 2022 ರ ಅಕ್ಟೋಬರ್‌ನಲ್ಲಿ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಗೂಗಲ್ಗೆ ದಂಡ ವಿಧಿಸಿತ್ತು. ಈ ವರ್ಷದ ಆರಂಭದಲ್ಲಿ ಆ್ಯಂಡ್ರಾಯ್ಡ್ಗಾಗಿ CCI ನಿರ್ದೇಶನಗಳನ್ನು ಅನುಸರಿಸುವುದಾಗಿ ಗೂಗಲ್ ಘೋಷಿಸಿತ್ತು. "ಆಂಡ್ರಾಯ್ಡ್ ಮತ್ತು ಗೂಗಲ್ ಪ್ಲೇಗಾಗಿ ಸಿಸಿಐನ ಇತ್ತೀಚಿನ ನಿಯಮಗಳ ಪ್ರಕಾರ ಭಾರತದಲ್ಲಿ ನಾವು ಹಲವಾರು ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗಿದೆ ಮತ್ತು ನಾವು ಆ ನಿರ್ದೇಶನಗಳನ್ನು ಹೇಗೆ ಪಾಲಿಸಲಿದ್ದೇವೆ ಎಂಬುದರ ಕುರಿತು ಸಿಸಿಐಗೆ ತಿಳಿಸಿದ್ದೇವೆ ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ.
"ನಾನ್ - ಕಂಪ್ಯಾಟಿಬಲ್ ಅಥವಾ ಮಾರ್ಪಡಿಸಲಾದ ರೂಪಾಂತರಗಳನ್ನು ನಿರ್ಮಿಸಲು ಪಾಲುದಾರರಿಗೆ ಬದಲಾವಣೆಗಳನ್ನು ಪರಿಚಯಿಸಲು ನಾವು ಆ್ಯಂಡ್ರಾಯ್ಡ್ನ ಕಂಪ್ಯಾಟಿಬಲ್ ಅಗತ್ಯತೆಗಳನ್ನು ನವೀಕರಿಸುತ್ತಿದ್ದೇವೆ" ಎಂದು ಗೂಗಲ್ ಹೇಳಿದೆ. ಬಳಕೆದಾರರ ಆಯ್ಕೆಯ ಬಿಲ್ಲಿಂಗ್ ಮೂಲಕ, ಡೆವಲಪರ್‌ಗಳು ಅಪ್ಲಿಕೇಶನ್‌ನಲ್ಲಿ ಡಿಜಿಟಲ್ ಕಂಟೆಂಟ್ ಖರೀದಿಸುವಾಗ ಗೂಗಲ್ ಪ್ಲೇ ನ ಬಿಲ್ಲಿಂಗ್ ಸಿಸ್ಟಮ್ ಜೊತೆಗೆ ಪರ್ಯಾಯ ಬಿಲ್ಲಿಂಗ್ ವ್ಯವಸ್ಥೆ ಆಯ್ಕೆ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಬಹುದು.