ಸ್ಯಾನ್ ಫ್ರಾನ್ಸಿಸ್ಕೋ: ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ನಿಂದ ನೇರವಾಗಿ ಅಮೆಜಾನ್ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುವಂತೆ ಮೆಟಾ ಅಮೆಜಾನ್ ನೊಂದಿಗೆ ಕೈಜೋಡಿಸಿದೆ. ಬಳಕೆದಾರರು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ಅಮೆಜಾನ್ಗೆ ಲಿಂಕ್ ಮಾಡಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಮೆಟಾ ಪರಿಚಯಿಸಿದೆ. ಇದನ್ನು ಬಳಸಿ ಫೀಡ್ನಲ್ಲಿ ಕಾಣಿಸುವ ಪ್ರಮೋಶನ್ಗಳನ್ನು ಕ್ಲಿಕ್ ಮಾಡಿ ಅಮೆಜಾನ್ನಿಂದ ನೇರವಾಗಿ ವಸ್ತುಗಳನ್ನು ಖರೀದಿಸಬಹುದು ಎಂದು ಟೆಕ್ಕ್ರಂಚ್ ವರದಿ ಮಾಡಿದೆ.
"ಇದೇ ಮೊದಲ ಬಾರಿಗೆ ಗ್ರಾಹಕರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಕಾಣಿಸುವ ಅಮೆಜಾನ್ನ ಜಾಹೀರಾತುಗಳನ್ನು ಕ್ಲಿಕ್ ಮಾಡಿ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಿಂದ ಹೊರಗೆ ಹೋಗದೆಯೇ ಅಮೆಜಾನ್ನಲ್ಲಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಲಿದೆ" ಎಂದು ಅಮೆಜಾನ್ ವಕ್ತಾರ ಕ್ಯಾಲಿ ಜೆರ್ನಿಗನ್ ಹೇಳಿದ್ದಾರೆ.
"ಹೊಸ ವೈಶಿಷ್ಟ್ಯದ ಭಾಗವಾಗಿ ಯುಎಸ್ ಗ್ರಾಹಕರಿಗೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಆಯ್ದ ಅಮೆಜಾನ್ ಉತ್ಪನ್ನ ಜಾಹೀರಾತುಗಳಲ್ಲಿ ನೈಜ-ಸಮಯದ ಬೆಲೆ, ಪ್ರೈಮ್ ಅರ್ಹತೆ, ಡೆಲಿವರಿ ಸಮಯ ಮತ್ತು ಉತ್ಪನ್ನದ ವಿವರಗಳು ಕಾಣಿಸಲಿವೆ" ಎಂದು ಅವರು ಹೇಳಿದರು. ಈ ವಾರದ ಆರಂಭದಲ್ಲಿ, ಮೆಟಾ "ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ತೊರೆಯದೆ ಅಮೆಜಾನ್ನಲ್ಲಿ ಖರೀದಿ ಮಾಡಿ" ಹೆಸರಿನ ಸಪೋರ್ಟ್ ಪೇಜ್ನಲ್ಲಿ ಹೊಸ ವೈಶಿಷ್ಟ್ಯದ ಬಗ್ಗೆ ಕೆಲ ವಿವರಗಳನ್ನು ನೀಡಿತ್ತು.