ನವದೆಹಲಿ:ತಾಂತ್ರಿಕವಾಗಿ ನಾವು ಮುಂದುವರಿದಷ್ಟೂ ಅದು ನಮಗೇ ಮಾರಕವಾಗಿ ಪರಿಣಮಿಸುತ್ತಿದೆ. ಮೊಬೈಲ್ ದತ್ತಾಂಶ (ಡೇಟಾ)ವನ್ನು ಕದಿಯುತ್ತಿರುವ ಗಂಭೀರ ಆರೋಪದ ಮೇಲೆ ಹಲವಾರು ಆ್ಯಪ್ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಮೊಬೈಲ್ ಖರೀದಿಗೂ ಮೊದಲು ಅದರಲ್ಲಿ ಸ್ಥಾಪಿಸಲಾಗಿರುವ ಆ್ಯಪ್ಗಳನ್ನು ಅಳಿಸುವುದಕ್ಕೂ ಅವಕಾಶ ನೀಡಬೇಕು ಎಂಬ ವಾದ ಮುಂದಿಟ್ಟಿದೆ.
ಇದಕ್ಕಾಗಿ ಐಟಿ ಸಚಿವಾಲಯ ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಈ ಪ್ರಕಾರ ಹೊಸ ಮೊಬೈಲ್‌ನಲ್ಲಿ ಖರೀದಿಗೂ ಮೊದಲೇ ಅಳವಡಿಸಲಾಗಿರುವ ಅಪ್ಲಿಕೇಶನ್‌ಗಳನ್ನು ಗ್ರಾಹಕರಿಗೆ ಬೇಡವೆಂದಾದಲ್ಲಿ ಅವುಗಳನ್ನು ಡಿಲೀಟ್ ಮಾಡುವ ಅವಕಾಶ ನೀಡಬೇಕು ಎಂದು ಪ್ರಸ್ತಾಪವನ್ನು ಇಟ್ಟಿದೆ. ಸದ್ಯದ ಪ್ರಕಾರ ಯಾವುದೇ ಮೊಬೈಲ್ ಕಂಪನಿಗಳು ಖರೀದಿ ಪೂರ್ವ ಕೆಲ ಆ್ಯಪ್ಗಳನ್ನು ಮೊಬೈಲ್‌ನಲ್ಲಿ ಇನ್ಸ್ಟಾಲ್ ಮಾಡುತ್ತಿದ್ದು ಅವುಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಿಲ್ಲ.
ಈ ಆ್ಯಪ್ಗಳಿಂದ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತಿರುವ ಆರೋಪ ಕೇಳಿಬರುತ್ತಿದ್ದು, ಆಯಾ ಗ್ರಾಹಕರಿಗೆ ಬೇಕಾದ ಆ್ಯಪ್ ಬಳಕೆ, ಬೇಡವಾದ ಆ್ಯಪ್ ಅಳಿಸಿ ಹಾಕಲು ಕಂಪನಿಗಳು ಅವಕಾಶ ನೀಡಬೇಕು. ಇದು ಭದ್ರತಾ ಕಾರಣಗಳಿಗಾಗಿ ಮುಖ್ಯ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಆ್ಯಪ್ ಅಳವಡಿಕೆ ಮುಕ್ತವಾಗಿರಲಿ:ಗ್ರಾಹಕರು ತಮಗೆ ಬೇಕಾದ ಆ್ಯಪ್ಗಳನ್ನು ಮೊಬೈಲ್‌ನಲ್ಲಿ ಅಳವಡಿಕೆ ಮಾಡಿಕೊಳ್ಳುವ ಅವಕಾಶವನ್ನು ಹೊಂದಿರಬೇಕು. ಯಾವುದೇ ಕಂಪನಿ ಪೂರ್ವದಲ್ಲೇ ಇನ್ಸ್ಟಾಲ್ ಮಾಡಿದ ಆ್ಯಪ್ಗಳು ಬೇಡವೆಂದಾದಲ್ಲಿ ಅವುಗಳನ್ನು ಡಿಲೀಟ್ ಮಾಡುವ ಅವಕಾಶವನ್ನೂ ಗ್ರಾಹಕ ಹೊಂದಿರಬೇಕು. ಇಲ್ಲವಾದಲ್ಲಿ ಅದು ಡೇಟಾ ಕಳವು, ಬೇಹುಗಾರಿಕೆಗೆ ದಾರಿಯಾಗುತ್ತದೆ. ಈ ಬಗ್ಗೆ ಆಯಾ ಮೊಬೈಲ್ ಕಂಪನಿಗಳ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ತಿಳಿಸಿದೆ.