ನವದೆಹಲಿ:2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040 ರ ವೇಳೆಗೆ ಚಂದ್ರನ ಮೇಲೆ ಭಾರತೀಯನ ಕಳುಹಿಸುವ ಗುರಿಯನ್ನು ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನೀಡಿದರು.
ಗಗನಯಾನ ಮಿಷನ್ ಯೋಜನೆಯಡಿ ಅಕ್ಟೋಬರ್ 21 ರ ಗಗನಯಾನಿಗಳ ರಕ್ಷಣೆಯ ವಾಹಕದ ಮೊದಲ ಪ್ರಾಯೋಗಿಕ ಪರೀಕ್ಷೆಯ ಸಿದ್ಧತಾ ಸಭೆಯಲ್ಲಿ ಅವರು ವಿಜ್ಞಾನಿಗಳಿಗೆ ಈ ನಿರ್ದೇಶನಗಳನ್ನು ನೀಡಿದರು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಅಧಿಕೃತ ಹೇಳಿಕೆ ನೀಡಿದೆ.
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಕೇಂದ್ರ ಬಾಹ್ಯಾಕಾಶ ಸಚಿವ ಡಾ.ಜಿತೇಂದ್ರ ಸಿಂಗ್ ಸೇರಿದಂತೆ ಇತರ ವಿಜ್ಞಾನಿಗಳು ಭಾಗವಹಿಸಿದ್ದ ಸಭೆಯಲ್ಲಿ ಗಗನಯಾನ್ ಮಿಷನ್ನ ಸಿದ್ಧತೆಯ ಪರಿಶೀಲನೆ ಮತ್ತು 2025 ರಲ್ಲಿ ಅದರ ಉಡಾವಣೆಯನ್ನು ದೃಢೀಕರಿಸಲಾಯಿತು.
ಅಲ್ಲದೇ, ಭಾರತದ ಬಾಹ್ಯಾಕಾಶ ಪರಿಶೋಧನೆಯ ಭವಿಷ್ಯದ ಪ್ರಯತ್ನಗಳಾದ ವೀನಸ್ ಆರ್ಬಿಟರ್ ಮಿಷನ್ ಮತ್ತು ಮಾರ್ಸ್ ಲ್ಯಾಂಡರ್ ಸೇರಿದಂತೆ ವಿವಿಧ ಗ್ರಹಗಳಿಗೆ ಉಪಗ್ರಹ ಕಳುಹಿಸುವ ಕಾರ್ಯಾಚರಣೆಗಳ ಕಡೆಗೆ ಹೆಚ್ಚಿನ ಗಮನ ನೀಡುವಂತೆಯೂ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಅವರು ಸಲಹೆ ನೀಡಿದರು.
ಚಂದ್ರನ ಮೇಲೆ ಮಾನವ ಯೋಜನೆ:ಇತ್ತೀಚಿನ ಚಂದ್ರಯಾನ-3 ಮತ್ತು ಆದಿತ್ಯ L1 ಮಿಷನ್‌ಗಳ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿಗಳು, ಇದೇ ಯಶಸ್ಸಿನ ಆಧಾರದ ಮೇಲೆ ಮುಂದಿನ ಯೋಜನೆಗಳನ್ನು ರೂಪಿಸಬೇಕು. 2035ರ ವೇಳೆಗೆ ಭಾರತ ಮೊದಲ ಅಂತರಿಕ್ಷ ನಿಲ್ದಾಣ ಹೊಂದಬೇಕು. ಜೊತೆಗೆ 2040 ರ ವೇಳೆಗೆ ಭಾರತೀಯನನ್ನು ಚಂದ್ರನ ಮೇಲೆ ಇಳಿಸುವುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಬೇಕು ಎಂದು ವಿಜ್ಞಾನಿಗಳಿಗೆ ಪ್ರಧಾನಿ ಹೇಳಿದರು.
ಚಂದ್ರನ ಮೇಲೆ ಮಾನವ ಇಳಿಸುವ ಯೋಜನೆ ಸೇರಿದಂತೆ ಎಲ್ಲ ಮಹತ್ವಾಕಾಂಕ್ಷಿ ಗುರಿಗಳ ಸಾಕಾರಕ್ಕೆ ಕೇಂದ್ರ ಬಾಹ್ಯಾಕಾಶ ಇಲಾಖೆಯು ಮಾರ್ಗಸೂಚಿ ಅಭಿವೃದ್ಧಿಪಡಿಸುತ್ತದೆ ಎಂದು ಭರವಸೆ ನೀಡಲಾಗಿದೆ. ಚಂದ್ರಯಾನ ಯೋಜನೆಗಳ ಸರಣಿ, ಹೊಸ ಪೀಳಿಗೆಯ ಉಡಾವಣಾ ವಾಹನ (NGLV), ಹೊಸ ಉಡಾವಣಾ ಕೇಂದ್ರ ನಿರ್ಮಾಣ, ಮಾನವ ಸಹಿತ ಗಗನಯಾನ, ಬಾಹ್ಯಾಕಾಶ ಕೇಂದ್ರಗಳ ಸ್ಥಾಪನೆ, ಇದಕ್ಕೆ ಸಂಬಂಧಿತ ತಂತ್ರಜ್ಞಾನಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಗಗನಯಾನ ಮಿಷನ್ನ ಪ್ರಯೋಗ:ಮಾನವ ಸಹಿತ ಗಗನಯಾನ ಮಿಷನ್ನ ಪರೀಕ್ಷಾರ್ಥ ಪ್ರಯೋಗಗಳು ಆರಂಭಿಸಲಾಗಿದ್ದು, ಮೊದಲ ಪರೀಕ್ಷೆ ಅ.21 ರಂದು ನಡೆಯಲಿದೆ. ಇಂಥದ್ದೇ ಮೂರು ಪ್ರಯೋಗಗಳು ನಡೆಸಲಾಗುವುದು. ಯೋಜನೆಯ ಯಶಸ್ಸಿಗಾಗಿ ಮಾನವ ರಹಿತ ಸುಮಾರು 20 ಪ್ರಮುಖ ಪರೀಕ್ಷೆಗಳನ್ನು ಯೋಜಿಸಲಾಗಿದೆ. ಅದರ ಬಳಿಕ ಮಾನವ ಸಹಿತ ಯೋಜನೆ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸಭೆಯ ಗಮನಕ್ಕೆ ತರಲಾಗಿದೆ.
ಇದೇ ವೇಳೆ, ಪ್ರಧಾನಿ ಮೋದಿ ಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಾಮರ್ಥ್ಯ, ಮತ್ತು ನಿಖರತೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ಇತಿಹಾಸ ಸೃಷ್ಟಿಸಲಿದೆ. ಇದು ರಾಷ್ಟ್ರದ ಬದ್ಧತೆಯಾಗಿದೆ ಎಂದರು.
ಇದನ್ನೂ ಓದಿ:ಅಕ್ಟೋಬರ್ 21ಕ್ಕೆ ಮಾನವಸಹಿತ 'ಗಗನಯಾನ'ದ ಮೊದಲ ಹಾರಾಟ ಪರೀಕ್ಷೆ: ಇಸ್ರೋ