ನವದೆಹಲಿ :ಅಪರೂಪದಲ್ಲೇ ಅಪರೂಪ ಎನ್ನಬಹುದಾದ ವೈದ್ಯಕೀಯ ಚಿಕಿತ್ಸೆ ಪ್ರಕರಣವೊಂದರಲ್ಲಿ ವೈದ್ಯರು ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೆ ಯಶಸ್ವಿ ಹೃದಯ ಕವಾಟ ಚಿಕಿತ್ಸೆ ಮಾಡಿದ್ದಾರೆ. ಭ್ರೂಣದ ಒಂದು ದ್ರಾಕ್ಷಿ ಗಾತ್ರದ ಹೃದಯದ ಬಂದ್ ಆಗಿದ್ದ ವಾಲ್ವ್ ಅನ್ನು ಮತ್ತೆ ತೆರೆಯುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಟ್ವೀಟ್ ಮಾಡುವ ಮೂಲಕ ವೈದ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೆಹಲಿಯ ಏಮ್ಸ್ನಲ್ಲಿ ದ್ರಾಕ್ಷಿ ಗಾತ್ರದ ಹೃದಯಕ್ಕೆ ಯಶಸ್ವಿ ಬಲೂನ್ ಡೈಲೇಶನ್ ಚಿಕಿತ್ಸೆ ಮಾಡಲಾಗಿದೆ. ಈ ವಿಧಾನವನ್ನು ಅಲ್ಟ್ರಾಸೌಂಡ್ ಮೂಲಕ ನಡೆಸಲಾಗುತ್ತದೆ. ಏಮ್ಸ್ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಜೊತೆಗೆ ಹೃದ್ರೋಗ ಮತ್ತು ಹೃದಯ ಅರಿವಳಿಕೆ ವಿಭಾಗದ ವೈದ್ಯರು ಈ ಸಂಕೀರ್ಣ ಬಲೂನ್ ಡೈಲೇಶನ್ ಚಿಕಿತ್ಸೆಯನ್ನು ಪೂರ್ಣಗೊಳಿಸಿದರು. ವೈದ್ಯರಿಂದ ಪಡೆದ ಮಾಹಿತಿಯ ಪ್ರಕಾರ, ಈ ಚಿಕಿತ್ಸೆಯ ನಂತರ ಭ್ರೂಣ ಮತ್ತು ತಾಯಿ ಇಬ್ಬರೂ ಚೆನ್ನಾಗಿದ್ದಾರೆ.
ಪ್ರಕರಣದ ವಿವರ :28 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರಿಗೆ ಈ ಹಿಂದೆ ಮೂರು ಬಾರಿ ಗರ್ಭಪಾತವಾಗಿತ್ತು. ಈ ಬಾರಿಯೂ ಭ್ರೂಣದ ಆರೋಗ್ಯದಲ್ಲಿ ಸಮಸ್ಯೆ ಎದುರಾದಾಗ ಅವರು ಏಮ್ಸ್‌ಗೆ ದಾಖಲಾಗಿದ್ದರು. ಪರೀಕ್ಷೆಯ ನಂತರ ವೈದ್ಯರು ಮಗುವಿನ ಹೃದಯದ ಮುಚ್ಚಿದ ಕವಾಟದ ಸ್ಥಿತಿಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಇದರೊಂದಿಗೆ ವಾಲ್ವ್ ತೆರೆಯಲು ಅನುಸರಿಸಬೇಕಾದ ಸಂಪೂರ್ಣ ಪ್ರಕ್ರಿಯೆಯನ್ನು ತಾಯಿಗೆ ವಿವರಿಸಲಾಯಿತು.
ದಂಪತಿಗಳು ಗರ್ಭಧಾರಣೆಯನ್ನು ಉಳಿಸಿಕೊಳ್ಳಲು ಬಯಸಿದ್ದರಿಂದ, ಅವರು ಚಿಕಿತ್ಸಾ ಕಾರ್ಯವಿಧಾನಕ್ಕೆ ವೈದ್ಯರಿಗೆ ಅನುಮತಿ ನೀಡಿದರು. ಇದರ ನಂತರ, ಈ ಪ್ರಕ್ರಿಯೆಯು ಏಮ್ಸ್ನ ಕಾರ್ಡಿಯೋಥೊರಾಸಿಕ್ ಸೈನ್ಸಸ್ ಸೆಂಟರ್‌ನಲ್ಲಿ ಪೂರ್ಣಗೊಂಡಿತು. ಇಂಟರ್ವೆನ್ಷನಲ್ ಹೃದ್ರೋಗ ತಜ್ಞರು ಮತ್ತು ಭ್ರೂಣ ಚಿಕಿತ್ಸಾ ತಜ್ಞರ ತಂಡ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇದೀಗ ವೈದ್ಯರ ತಂಡ ಭ್ರೂಣದ ಬೆಳವಣಿಗೆಯ ಮೇಲೆ ನಿಗಾ ಇಡುತ್ತಿದೆ. ವೈದ್ಯರ ಪ್ರಕಾರ, ಮಗು ತಾಯಿಯ ಹೊಟ್ಟೆಯಲ್ಲಿರುವಾಗಲೇ ಕೆಲವು ರೀತಿಯ ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು.
ಅಲ್ಟ್ರಾಸೌಂಡ್ ಮೂಲಕ 90 ಸೆಕೆಂಡುಗಳಲ್ಲಿ ಚಿಕಿತ್ಸೆ ಪೂರ್ಣ : ಸಂಕೀರ್ಣವಾದ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಏಮ್ಸ್ ವೈದ್ಯರು, ನಾವು ಮೊದಲಿಗೆ ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಜಿಯನ್ನು ಸೇರಿಸಿದೆವು. ನಂತರ ಬಲೂನ್ ಕ್ಯಾಥೆಟರ್ ಬಳಸಿ, ರಕ್ತದ ಹರಿವನ್ನು ಸುಧಾರಿಸಲು ಅಡಚಣೆಯ ಕವಾಟವನ್ನು ತೆರೆಯಲಾಯಿತು. ಈಗ ಮಗುವಿನ ಹೃದಯವು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಂಥ ಪ್ರಕ್ರಿಯೆಯಿಂದ ಭ್ರೂಣದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದನ್ನು ಬಹಳ ಎಚ್ಚರಿಕೆಯಿಂದ ಮಾಡಲಾಯಿತು. ಇಡೀ ಚಿಕಿತ್ಸಾ ಪ್ರಕ್ರಿಯೆಯನ್ನು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ. ಸಾಮಾನ್ಯವಾಗಿ ನಾವು ಇಂಥ ಚಿಕಿತ್ಸೆಗಳನ್ನು ಆಂಜಿಯೋಗ್ರಫಿ ರೀತಿಯಲ್ಲಿ ಮಾಡುತ್ತೇವೆ. ಆದರೆ ಈ ಪ್ರಕರಣದಲ್ಲಿ ಆಂಜಿಯೋಗ್ರಫಿ ಮಾಡುವುದು ಸಾಧ್ಯವಿರಲಿಲ್ಲ. ಇಡೀ ಪ್ರಕ್ರಿಯೆಗೆ ತೆಗೆದುಕೊಂಡ ಸಮಯವನ್ನು ಕೂಡ ನಾವು ಅಳೆದಿದ್ದೇವೆ. ಇದನ್ನು ಕೇವಲ 90 ಸೆಕೆಂಡುಗಳಲ್ಲಿ ಮುಗಿಸಲಾಯಿತು ಎಂದು ಹೇಳಿದರು.
ಇದನ್ನೂ ಓದಿ : ದೃಷ್ಟಿ ಹೀನತೆಗೆ ಕಾರಣವಾಗುವ ಗ್ಲುಕೋಮ; ಈ ಬಗ್ಗೆ ಇರಲಿ ಕಾಳಜಿ